ಮಂಗಳೂರು: ನಗರದಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣದ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ನೀಡಲಾದ ದೂರಿನ ವಿಚಾರಣೆ ಡಿ. 31 ರಂದು ಆರಂಭವಾಗಲಿದೆ ಎಂದು ದೂರುದಾರೆ, ಮಹಿಳಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಂಯೋಜಕಿ ಲಾವಣ್ಯ ಬಲ್ಲಾಳ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂನಿಷ್ ಆಲಿ ಅಹ್ನದ್, ರಕ್ಷಿತ್ ಶಿವರಾಮ್ ಅವರು ಸೇರಿ ಮಾನವ ಹಕ್ಕುಗಳ ಆಯೋಗಕ್ಕೆ ಸಮಗ್ರ ತನಿಖೆಗೆ ದೂರು ನೀಡಿದ್ದೇವೆ. ಇದರ ವಿಚಾರಣೆಯನ್ನು ಡಿಸೆಂಬರ್ 31 ರಂದು ಧೀರೇಂದ್ರ ಹೀರಾವಾಲ ವಘೇಲ ಅಧ್ಯಕ್ಷತೆಯ ಮಾನವ ಹಕ್ಕುಗಳ ಆಯೋಗದ ಪೂರ್ಣ ಪ್ರಮಾಣದ ಪೀಠ ಕೈಗೆತ್ತಿಕೊಳ್ಳಲಿದೆ ಎಂದರು.
ಹಿಂಸಾಚಾರ ಪ್ರಕರಣದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಪಿ. ಎಸ್. ಹರ್ಷ ಅವರು ನ್ಯಾಯಾಲಯಗಳ ಆದೇಶವನ್ನು ಉಲ್ಲಂಘಿಸಿ ಜನರ ಮೇಲೆ ಗುಂಡು ಹಾರಿಸಿ ಇಬ್ಬರ ಸಾವಿಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿದರು. ಹಾಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಯೋಗಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಲುಕ್ಮಾನ್ ಬಂಟ್ವಾಳ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.