ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಆರೋಪಿ ಆದಿತ್ಯರಾವ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಕೆಲಸ ಸಿಗದ ಕೋಪದಲ್ಲಿ ಕೃತ್ಯ ಎಸಗಿದ್ದಾನೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಡಾ. ಪಿ. ಎಸ್. ಹರ್ಷ ತಿಳಿಸಿದ್ದಾರೆ.
'ಇಂಟರ್‌ನೆಟ್ ಮೂಲಕ ಬಾಂಬ್ ತಯಾರಿಸೋದನ್ನು ಕಲಿತ'
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಪ್ರಯತ್ನಿಸಿದ್ದ, ಆದರೆ ಅದು ಬೇರೆಯವರ ಪಾಲಾಗಿತ್ತು. ಇದರಿಂದ ಕೋಪಗೊಂಡು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡುವುದಕ್ಕೆ ಶುರು ಮಾಡಿದ್ದಾನೆ. ರೈಲ್ವೆ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಹಾಕಿ ಬಂಧಿತನಾಗಿದ್ದ. ಇದರಿಂದ ಮತ್ತಷ್ಟು ಆಕ್ರೋಶಗೊಂಡು ಇಂಟರ್‌ನೆಟ್ ಮೂಲಕ ಬಾಂಬ್ ತಯಾರಿಕಾ ವಸ್ತುಗಳನ್ನು ತರಿಸಿ ಸ್ವತಃ ತಾನೇ ಬಾಂಬ್ ತಯಾರಿಸಿ ವಿಮಾನ ನಿಲ್ದಾಣ ಸ್ಟೋಟಗೊಳಿಸಲು ಸಂಚು ರೂಪಿಸಿದ್ದ ಎಂದು ಪೊಲೀಸ್ ಕಮೀಷನರ್ ಡಾ. ಪಿ. ಎಸ್. ಹರ್ಷ ವಿವರಿಸಿದ್ರು.
ಮಂಗಳೂರು ಕುಡ್ಲ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಾ ಬಾಂಬ್ ತಯಾರಿಸಿ ಅಲ್ಲಿದ್ದರೆ ಅನುಮಾನ ಬರುತ್ತದೆ ಎಂದು ಕಾರ್ಕಳದ ಹೋಟೆಲ್ವೊಂದರಲ್ಲಿ ಕೆಲಸಕ್ಕೆ ಸೇರಿದ್ದಾನೆ. ಬಳಿಕ ಅಲ್ಲಿಂದ ಜ. 20 ರಂದು ಮಂಗಳೂರಿಗೆ ಬಂದು ಬಜ್ಪೆಗೆ ತೆರಳಿ ಅಲ್ಲಿ ಸೆಲೂನ್ವೊಂದಕ್ಕೆ ತೆರಳಿದ್ದಾನೆ. ಇಲ್ಲಿ ತಾನು ತಂದಿದ್ದ ಬ್ಯಾಗನಿಂದ ಬಾಂಬ್ ತೆಗೆದುಕೊಂಡು ವಿಮಾನ ನಿಲ್ದಾಣಕ್ಕೆ ಬಂದು ಬಾಂಬ್ ಇಟ್ಟು ತೆರಳಿದ್ದಾನೆ. ಬಳಿಕ ಪೊಲೀಸರ ಕಣ್ಣು ತಪ್ಪಿಸಿಕೊಳ್ಳಲು ಶಿರಸಿ, ಶಿವಮೊಗ್ಗ ನಂತರ ಬೆಂಗಳೂರಿಗೆ ತೆರಳಿ ಅಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಸಿಸಿಟಿವಿ ದೃಶ್ಯಗಳನ್ನು ನೋಡಿ ಶರಣಾದ ಆರೋಪಿ ಈತನೇ ಎಂದು ಪೊಲೀಸರು ಈತನನ್ನು ದಸ್ತಗಿರಿ ಮಾಡಿದ್ದಾರೆ ಎಂದು ಆಯುಕ್ತರು ತಿಳಿಸಿದರು.
'ಬಿಇ ಮೆಕ್ಯಾನಿಕ್, ಎಂಬಿಎ ಪದವೀಧರ'
ಆದಿತ್ಯರಾವ್ ಮೈಸೂರಿನಲ್ಲಿ ಬಿಇ ಮೆಕ್ಯಾನಿಕ್ ಪದವಿ ಹಾಗೂ ಎಂಬಿಎ ಪದವಿ ಪಡೆದಿದ್ದ. ಈತ ಬ್ಯಾಂಕಿಂಗ್ ಹಾಗೂ ಇನ್ಸೂರೆನ್ಸ್ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾನೆ. ಆದ್ರೆ, ಈತ ಸುದೀರ್ಘವಾಗಿ ಎಲ್ಲೂ ಕೆಲಸ ಮಾಡಿಲ್ಲ. ಈತನಿಗೆ ಇಂಡೋರ್‌ನಲ್ಲಿ ಕೆಲಸ ಮಾಡುವ ಆಸಕ್ತಿ ಕಡಿಮೆಯಾಗಿತ್ತು.
ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಮಾಡಿ ಬಿಟ್ಟು ನಂತರ ಆಳ್ವಾಸ್ ಕಾಲೇಜಿನಲ್ಲಿ, ಎಸ್.ಡಿ.ಎಂ ಕಾಲೇಜು ಉಜಿರೆ, ಮೂಡಬಿದಿರೆ ಎಂಐಟಿ ಕಾಲೇಜಿನಲ್ಲೂ ಕೆಲಸ ಮಾಡುತ್ತಾನೆ. ನಂತರ ಬಾರ್‌ನಲ್ಲಿ ಊಟ, ವಸತಿ ಸಿಗುತ್ತೆ ಅಂತ ಅಲ್ಲೂ ಕೆಲಸ ಮಾಡಿದ್ದಾನೆ. ಅನೇಕ ಹೋಟೆಲ್‌ಗಳಲ್ಲಿ ಕೆಲಸ ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ಹೇಳಿರುವುದಾಗಿ ಆಯುಕ್ತರು ತಿಳಿಸಿದ್ರು.
'ಏರ್‌ಪೋರ್ಟ್‌ನಲ್ಲಿ ಕೆಲಸ ಸಿಗದಿದ್ದಕ್ಕೆ Revenge'
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಕೆಲಸ ಸಿಗದ ಹಿನ್ನೆಲೆಯಲ್ಲಿ ವಿಮಾನ ಇಲಾಖೆ ಕುರಿತು ಸ್ಟಡಿ ಮಾಡುತ್ತಾನೆ. 2018ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ 2 ಬಾರಿ ಬೆದರಿಕೆ ಕಾಲ್ ಮಾಡಿದ್ದಾನೆ. ನಂತರ ರೈಲ್ವೆ ಇಲಾಖೆಗೂ ಬೆದರಿಕೆ ಕಾಲ್ ಮಾಡಿದ್ದಾನೆ. ಹೀಗೆ ಒಟ್ಟು 3 ಪ್ರಕರಣ ಇವನ ವಿರುದ್ಧ ದಾಖಲು ಆಗಿತ್ತು. ಚಿಕ್ಕಬಳ್ಳಾಪುರ ಜೈಲಿನಲ್ಲಿ 1 ವರ್ಷ ಜೈಲುವಾಸ ಅನುಭವಿಸುತ್ತಾನೆ. ನಂತರ ಜೈಲಿನಿಂದ ಹೊರ ಬಂದು ನಂತರ ವಿಮಾನ ನಿಲ್ದಾಣಕ್ಕೆ ಏನಾದರೂ ಮಾಡಬೇಕು ಅಂತ ವಿವಿಧ ರೀತಿಯಲ್ಲಿ ಆರೋಪಿ ಅಧ್ಯಯನ ಮಾಡುತ್ತಾನೆ ಎಂದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಮತ್ತು ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ ಹಿನ್ನೆಲೆ ಎರಡು ಗಂಭೀರ ಪ್ರಕರಣವನ್ನು ಈತನ ವಿರುದ್ಧ ದಾಖಲಿಸಿದ್ದೇವೆ. ಇವತ್ತು ವೈದ್ಯಕೀಯ ಪರೀಕ್ಷೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ಟೈಮ್ ಇಟ್ಟು ಸ್ಫೋಟ ಮಾಡುವ ಉದ್ದೇಶ ಹೊಂದಿದ್ದ ಈತ ಒಬ್ಬನೇ ಈ ಕೃತ್ಯ ಎಸಗಿರೋದಾಗಿ ಡಾ. ಪಿ.ಎಸ್. ಹರ್ಷ ಸ್ಪಷ್ಟಪಡಿಸಿದರು.