ಮಂಗಳೂರು: ಹೊರವಲಯದ ಗಂಜಿಮಠದ ಮಳಲಿ ಎಂಬಲ್ಲಿ ಮಸೀದಿಯ ನವೀಕರಣದ ವೇಳೆ ದೇಗುಲ ಶೈಲಿ ಪತ್ತೆಯಾದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್(ವಿಹೆಚ್ಪಿ) ಮತ್ತು ಬಜರಂಗದಳ ತಾಂಬೂಲ ಪ್ರಶ್ನೆಯನ್ನು ಬುಧವಾರ ನಡೆಸಲು ಉದ್ದೇಶಿಸಿರುವುದರಿಂದ ಮಸೀದಿಯ ಸುತ್ತಮುತ್ತಲಿನ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಕಳೆದ ಎಪ್ರಿಲ್ 21 ರಂದು ಮಳಲಿಯ ಮಸೀದಿಯ ನವೀಕರಣದ ಕಾಮಗಾರಿ ವೇಳೆ ದೇಗುಲದ ಶೈಲಿ ಪತ್ತೆಯಾಗಿತ್ತು. ಬಳಿಕ ಮಂಗಳೂರು ತಹಶಿಲ್ದಾರ್ ಅವರು ಕಾಮಗಾರಿ ಮುಂದುವರಿಸದಂತೆ ಸೂಚಿಸಿದ್ದರು. ಆ ಬಳಿಕ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲಾಗಿತ್ತು. ಇದರ ಮಧ್ಯೆ ವಿಹೆಚ್ಪಿ ಮತ್ತು ಬಜರಂಗದಳದಿಂದ ಹಿಂದೂಗಳ ಧಾರ್ಮಿಕ ನಂಬುಗೆಯಾಗಿರುವ ಅಷ್ಟಮಂಗಲ ನಡೆಸಲು ನಿರ್ಧರಿಸಿದ್ದು, ಇದರ ಪೂರ್ವಭಾವಿಯಾಗಿ ನಾಳೆ ತಾಂಬೂಲ ಪ್ರಶ್ನಾ ಚಿಂತನೆಯನ್ನು ಮಳಲಿಯ ರಾಮಂಜನೆಯ ಭಜನಾ ಮಂದಿರದಲ್ಲಿ ನಡೆಸಲು ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಜುಮ್ಮಾ ಮಸೀದಿಯ ಸುತ್ತಮುತ್ತಲಿನ 500 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಿ ನಿಷೇಧಾಜ್ಞೆಯನ್ನು ಹೇರಲಾಗಿದೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ.
ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರ.. ಸಚಿವ, ಶಾಸಕರ ಮನೆಗೆ ಬೆಂಕಿ, 20ಕ್ಕೂ ಅಧಿಕ ಪೊಲೀಸರಿಗೆ ಗಾಯ