ಮಂಗಳೂರು: ದುಷ್ಕರ್ಮಿಗಳ ತಂಡವೊಂದು ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಮುಂಚೂರು ಎಂಬಲ್ಲಿ ನಡೆದಿದೆ.
ಬಿಜೆಪಿ ಕಾರ್ಯಕರ್ತ ಮಂಚೂರು ನಿವಾಸಿ ಯಶೋಧರ(28) ಎಂಬುವವರ ಮೇಲೆ ದಿವಾಕರ್, ದಿನೇಶ್ ಶೆಟ್ಟಿ, ಅಶ್ವಿತ್ ಕುಲಾಲ್, ಯಶೋಧರ್ ಅಗರಮೇಲು ಎಂಬುವವರು ಹಲ್ಲೆ ಮಾಡಿದ್ದಾಗಿ ಆರೋಪಿಸಲಾಗಿದೆ.
ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ಯಶೋಧರ, ಸ್ಥಳೀಯವಾಗಿ ಪಕ್ಷದ ಸಂಘಟನೆಯನ್ನು ಕಟ್ಟಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಪಕ್ಷದ ಪರ ದುಡಿದಿದ್ದ ಇವರ ಮೇಲೆ ಕಣ್ಣಿಟ್ಟಿದ್ದ ತಂಡವೊಂದು ಹಲ್ಲೆ ಮಾಡಿದೆ ಎಂದು ದೂರಲಾಗಿದೆ.
ಸದ್ಯ ಗಾಯಗೊಂಡಿದ್ದ ಯಶೋಧರ ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.