ಮಂಗಳೂರು: ಪ್ರಸಾರಭಾರತಿ ಸಂಸ್ಥೆಯು ಆಕಾಶವಾಣಿಗೆ ಹೊಸಸ್ವರೂಪ ನೀಡಲು ಮುಂದಾಗಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಆಕಾಶವಾಣಿ ಕೇಂದ್ರಗಳಲ್ಲಿ ರಾಜ್ಯದ ಪ್ರಧಾನ ಆಕಾಶವಾಣಿ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ. ಇದರ ಜೊತೆಗೆ ದಿನದ ಸಾಕಷ್ಟು ಕಾಲ ಪ್ರಸಾರವಾಗುತ್ತಿದ್ದ ಪ್ರಾದೇಶಿಕ ಕಾರ್ಯಕ್ರಮಗಳೂ ಒಂದೆರಡು ಗಂಟೆಗಳಿಗೆ ಸೀಮಿತಗೊಳ್ಳಲಿವೆ.
ಪ್ರಸಾರ ಭಾರತಿಯ ಪ್ರಧಾನ ಆಕಾಶವಾಣಿ ಕೇಂದ್ರದಿಂದಲೇ ಪ್ರಸಾರವಾಗಬೇಕೆಂಬ ಈ ನಿರ್ಧಾರಕ್ಕೆ ಕರ್ನಾಟಕವನ್ನು ಹೊರತುಪಡಿಸಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಇದು ಇನ್ನೂ ಜಾರಿಯಾಗಿಲ್ಲ. ಆದರೆ, ಕರ್ನಾಟಕದಲ್ಲಿ ಯಾರೂ ಈ ಬಗ್ಗೆ ವಿರೋಧ ವ್ಯಕ್ತಪಡಿಸದ ಕಾರಣ ಯುಗಾದಿಯಿಂದಲೇ ಬೆಂಗಳೂರು ಕೇಂದ್ರಿತವಾಗಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಈ ಮೂಲಕ ಸ್ಥಳೀಯ ಕಾರ್ಯಕ್ರಮಗಳೂ ಸೀಮಿತ ಆಗಿರುವುದರಿಂದ ಅರೆಕಾಲಿಕ ಉದ್ಘೋಷಕರಾಗಿ, ಕಾರ್ಯಕ್ರಮ ನಿರ್ವಾಹಕರಾಗಿ ಕೆಲಸ ನಿರ್ವಹಿಸುವ ನೌಕರರ ಕೆಲಸಕ್ಕೂ ಕುತ್ತು ಉಂಟಾಗಲಿದೆ.
ಈ ಬಗ್ಗೆ ಮಂಗಳೂರು ಆಕಾಶವಾಣಿ ಅರೆಕಾಲಿಕ ಉದ್ಘೋಷಕ ಪ್ರವೀಣ್ ಅಮ್ಮೆಂಬಳ ಮಾತನಾಡಿ, ರಾಜ್ಯದ ಪ್ರಧಾನ ಆಕಾಶವಾಣಿ ಕೇಂದ್ರಗಳೇ ಕಾರ್ಯಕ್ರಮವನ್ನು ನಿರ್ವಹಿಸುವ ಮೂಲಕ ಸ್ಥಳೀಯತೆಯ ಹುಟ್ಟಡಗಿಸುವ ಪ್ರಯತ್ನ ಆಗುತ್ತಿದೆ. ನಿಜವಾಗಿ ಈ ಆದೇಶ ಬರಬೇಕಾದಲ್ಲಿಂದ ಬಂದಿಲ್ಲ. ಇದು ಅಧಿಕಾರ ಶಾಹಿಗಳ ಒತ್ತಡದಿಂದ ಬಂದಿದೆ ಎಂದು ನಮಗನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ಹುನ್ನಾರಕ್ಕೆ ಪ್ರತಿರೋಧ ಒಡ್ಡಬೇಕಾಗಿದೆ. ಪ್ರಧಾನಿ ಮೋದಿಯವರು 'ಮನ್ ಕೀ ಬಾತ್' ಮೂಲಕ ಆಕಾಶವಾಣಿ ನೌಕರರೊಂದಿಗೆ ಇರುತ್ತೇವೆ ಎಂಬ ಭರವಸೆ ನೀಡಿದ್ದರು. ಆದ್ರೀಗ ಯಾವ ರೀತಿ ನಮ್ಮೊಂದಿಗೆ ಇದ್ದಾರೆ ಎಂಬ ಬಗ್ಗೆ ಖೇದ ಉಂಟಾಗುತ್ತಿದೆ. ಆದ್ದರಿಂದ ಈ ವಿಚಾರವನ್ನು ಅಲ್ಲಿಯವರೆಗೂ ತಲುಪಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಮಂಗಳೂರು ಆಕಾಶವಾಣಿಯ ಅರೆಕಾಲಿಕ ಉದ್ಘೋಷಕಿ ಗಾಯತ್ರಿ ನಾಣಿಲ್ ಮಾತನಾಡಿ, ಜ.26ರಿಂದಲೇ ಈ ವಿಚಾರ ಜಾರಿಗೆ ಬರುವ ಬಗ್ಗೆ ಮಾತುಗಳು ಕೇಳಿ ಬರುತ್ತಿತ್ತು. ಆದರೆ, ಕರ್ನಾಟಕ ಹೊರತುಪಡಿಸಿ ದಕ್ಷಿಣದ ಇತರ ರಾಜ್ಯಗಳು ಈ ಬಗ್ಗೆ ಆಕ್ಷೇಪ ಎತ್ತಿರುವುದರಿಂದ ವಿಷಯ ಅಲ್ಲಿಗೇ ತಣ್ಣಗಾಗಿತ್ತು. ಈಗ ಕಾಸ್ಟ್ ಕಟ್ಟಿಂಗ್ (ವೆಚ್ಚ ಕಡಿತ) ರೂಪದಲ್ಲಿ ಮತ್ತೆ ಮೇಲ್ಪಂಕ್ತಿಗೆ ಬಂದಿದೆ. ಆಕಾಶವಾಣಿ ಕೇವಲ ಮನೋರಂಜನಾ ಮಾಧ್ಯಮವಲ್ಲ. ಇದು ಜ್ಞಾನದ ಭಂಡಾರ. ಇಂತಹ ಆಕಾಶವಾಣಿಯನ್ನು ಮುಚ್ಚುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮಂಗಳೂರು ಆಕಾಶವಾಣಿಯಲ್ಲಿ ಬರೀ ಕನ್ನಡ ಮಾತ್ರವಲ್ಲದೆ ತುಳು, ಕೊಂಕಣಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿದೆ. ಈ ಮೂಲಕ ಅನೇಕ ಸಾಹಿತಿಗಳು, ಬರಹಗಾರರು ಮುನ್ನೆಲೆಗೆ ಬಂದಿದ್ದಾರೆ. ಅಂತಹ ಆಕಾಶವಾಣಿಯನ್ನು ಮುಚ್ಚಲು ಹೊರಟಿರೋದು ಖೇದಕರ ಸಂಗತಿ. ಆದ್ದರಿಂದ ಆಕಾಶವಾಣಿ ಮುಚ್ಚಲು ಬಿಡಬಾರದೆನ್ನುವುದು ನಮ್ಮೆಲ್ಲರ ಕಳಕಳಿಯ ವಿನಂತಿ ಎಂದರು.
ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಆಯುಕ್ತ, ಆಡಳಿತಗಾರರಿಂದ ಕೋವಿಡ್ ಸಹಾಯವಾಣಿ 1912ಕ್ಕೆ ಚಾಲನೆ