ಮಂಗಳೂರು: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿಯವರು ಸರ್ಕಾರದಲ್ಲಿದ್ದಾಗ ಜಲ ಯೋಜನೆಗಳಿಗೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿಂದು ಮೌನಿ ಸಿಎಂ ಎಂದ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅನಿಸಿಕೆ ಮಹತ್ವದ್ದಲ್ಲ. ಜನರ ತೀರ್ಮಾನವಷ್ಟೇ ಮುಖ್ಯ. ಧಾರವಾಡ ಘಟನೆ, ಶಿವಮೊಗ್ಗದ ಕೊಲೆ ಪ್ರಕರಣ, ಕೋಲಾರದ ಘಟನೆಗಳಿಗೆ ತಕ್ಷಣ ಕ್ರಮ ಕೈಗೊಂಡು, ಎಲ್ಲೆಲ್ಲಿ ಕ್ರಮ ತೆಗೆದುಕೊಳ್ಳಬೇಕೋ ಅಲ್ಲೆಲ್ಲಾ ಕ್ರಮ ಕೈಗೊಂಡಿದ್ದೇವೆ ಎಂದರು.
ಜೆಡಿಎಸ್ ಹಮ್ಮಿಕೊಂಡಿರುವ ಜನತಾ ಜಲಧಾರೆ ಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ನವರು ಮೇಕೆದಾಟು ಪ್ರಾರಂಭ ಮಾಡಿದ ತಕ್ಷಣ ಜೆಡಿಎಸ್ನವರು ಜಲಯಾತ್ರೆ ಮಾಡುತ್ತೇವೆ ಎಂದು ಹೇಳಿದ್ದರು. ಜಲಯಾತ್ರೆ ಎಂದು ಹೇಳುತ್ತಿದ್ದಾರೆ. ಮಾಡಲಿ, ಎಲ್ಲಾ ಯಾತ್ರೆಗಳು ಚುನಾವಣೆ ಹತ್ತಿರ ಬಂದಾಗ ನಡೆಯುತ್ತಿರುತ್ತವೆ. ಅದರ ಬಗ್ಗೆ ನಾನೇನು ಹೇಳಲ್ಲ ಎಂದು ತಿಳಿಸಿದರು.
ಸಚಿವ ಈಶ್ವರಪ್ಪ ಮೇಲೆ 40% ಆರೋಪ ಮಾಡಿರುವ ವ್ಯಕ್ತಿ ಮಿಸ್ಸಿಂಗ್ ಹಾಗೂ ತನ್ನ ಸಾವಿಗೆ ಈಶ್ವರಪ್ಪನವರೇ ಕಾರಣ ಎಂಬ ಪತ್ರ ಬರೆದಿದ್ದಾರೆಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಅದರ ಬಗ್ಗೆ ತನಗೇನು ಮಾಹಿತಿಯಿಲ್ಲ. ಮಾಹಿತಿಯಿಲ್ಲದೆ ನಾನೇನು ಮಾತನಾಡುವುದಿಲ್ಲ. ನೀವು ಹೇಳಿದ ಬಳಿಕವೇ ನನಗೆ ಈ ವಿಚಾರ ಗೊತ್ತಾಗಿರೋದು, ನಿಮ್ಮ ಬಳಿಯೇನಾದರೂ ಮಾಹಿತಿ ಇದ್ದಲ್ಲಿ ನೀಡಿ, ವಿಚಾರಣೆ ಮಾಡುತ್ತೇವೆ ಎಂದು ಹೇಳಿದರು.
ಕೋಮು ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಯಾವುದೇ ಧರ್ಮವೂ ಇಲ್ಲ, ಯುದ್ಧವೂ ಇಲ್ಲ. ಕೆಲವೊಂದು ಸಂಘಟನೆಗಳು ಪ್ರಚೋದನಾಕಾರಿಯಾಗಿ ಮಾತನಾಡೋದೇ ದೊಡ್ಡ ವಿಚಾರವಲ್ಲ. ಕಾನೂನು ಸುವ್ಯವಸ್ಥೆ, ಶಾಂತಿಯನ್ನು ಕಾಪಾಡೋದು ನಮ್ಮ ಕರ್ತವ್ಯ. ಯಾರೇ ಆಗಲಿ ಕಾನೂನು ಕೈಗೆತ್ತಿಕೊಂಡರೆ ನಾವು ತಕ್ಷಣ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.
ಕೆಲವರು ಹಿಂದಿನಿಂದ ಪ್ರಚೋದನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವುಗಳನ್ನು ಪೊಲೀಸ್ ಅಧಿಕಾರಿಗಳಿಗೆ ಗಮನಿಸಲು ತಿಳಿಸಿದ್ದೇನೆ. ನಿನ್ನೆ ಡಿಜಿಯವರು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಕಾನೂನು ಸುವ್ಯವಸ್ಥೆ ಹಾಗೂ ಜನರ ರಕ್ಷಣೆ ಬಗ್ಗೆ ಬಹಳ ಸ್ಪಷ್ಟ ಸೂಚನೆ ನೀಡಿದ್ದಾರೆ. ಕಾನೂನು ಪಾಲನೆಯಲ್ಲಿ ಯಾವುದೇ ರಾಜಿಯಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಜೆಡಿಎಸ್ 'ಜನತಾ ಜಲಧಾರೆ': ಹೆಚ್ಡಿಕೆ ಕರ್ಮಭೂಮಿಯಿಂದಲೇ 15 ಗಂಗಾ ರಥಗಳಿಗೆ ಇಂದು ಹಸಿರು ನಿಶಾನೆ