ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಉಡುಪಿ ಅದಮಾರು ಮಠದ ಕಿರಿಯ ಯತಿಗಳಾದ ಈಶಪ್ರಿಯ ತೀರ್ಥ ಶ್ರೀಗಳು ಇಂದು ಭೇಟಿ ನೀಡಿದ್ದಾರೆ.
ದೇಗುಲಕ್ಕೆ ಆಗಮಿಸಿದ ಯತಿಗಳನ್ನು ಕಾಶಿಕಟ್ಟೆಯಲ್ಲಿ ಸ್ವಾಗತಿಸಿದ ಬಳಿಕ ಭವ್ಯ ಮೆರವಣಿಗೆಯಲ್ಲಿ ದೇಗುಲಕ್ಕೆ ಕರೆದೊಯ್ಯಲಾಯಿತು. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದ ಬಳಿಕ ಶ್ರೀಗಳು ಸಂಪುಟ ನರಸಿಂಹ ದೇವರ ದರ್ಶನ ಪಡೆದಿದ್ದಾರೆ. ಮಧ್ಯಾಹ್ನ ಅದಮಾರು ಪೀಠದ ಚತುರ್ಭುಜ ಕಾಳಿಯ ಮರ್ಧನ ಶ್ರೀ ದೇವರಿಗೆ ಪೂಜಾಕೈಂಕರ್ಯ ನೆರವೇರಿಸಿದರು.
ಮಧ್ವಾಚಾರ್ಯರ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಮೂಲ ಸಂಪ್ರದಾಯ ಪ್ರಕಾರ ಉಡುಪಿಯಲ್ಲಿ ಪರ್ಯಾಯ ನಡೆಯುವ ಮೊದಲು ಯತಿಗಳಿಗೆ ಭಿಕ್ಷೆ ನೀಡುವುದು ಹಾಗೂ ಪರ್ಯಾಯಕ್ಕೆ ಬೇಕಾದ ಅಕ್ಕಿ, ತೆಂಗಿನಕಾಯಿ, ದವಸ ಧಾನ್ಯಗಳನ್ನು ಕಾಣಿಕೆ ರೂಪದಲ್ಲಿ ಸಮರ್ಪಣೆ ಮಾಡುವುದು ಮೂಲ ಸಂಪ್ರದಾಯ. ಅದರಂತೆ ಶ್ರೀಗಳು ಆಗಮಿಸಿದ್ದಾರೆ ಎನ್ನಲಾಗಿದೆ.
ಈ ಬಾರಿ ಪರ್ಯಾಯವು ಉಡುಪಿಯಲ್ಲಿ ಜನವರಿ 7ರಂದು ನಡೆಯಲಿದೆ. ಈ ಬಾರಿ ಅದಮಾರು ಮಠದ ಶ್ರೀಗಳು ಪರ್ಯಾಯ ನಡೆಸಲಿದ್ದಾರೆ.