ಮಂಗಳೂರು: ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿಯವರು ಪಕ್ಷದಲ್ಲಿ ಮೂಲೆಗುಂಪಾಗುತ್ತಿದ್ದಂತೆ, ಪೂಜಾರಿ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡು ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ನ ನಾಯಕರು ತಮ್ಮ ಹಲವಾರು ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡರು.
ಜನಾರ್ದನ ಪೂಜಾರಿಯವರೇ ದ.ಕ ಜಿಲ್ಲೆಯ ಕಾಂಗ್ರೆಸ್ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆ ಇಂತಹ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಈ ಹಿಂದೆಯೂ ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ ಬಂದವರ ಸಂಖ್ಯೆ ಕಡಿಮೆ ಇರಲಿಲ್ಲ. ಇತ್ತೀಚೆಗೆ ಕಾಂಗ್ರೆಸ್ನ ನಿಕಟಪೂರ್ವ ಕಾರ್ಪೊರೇಟರ್ ಆಶಾ ಡಿಸಿಲ್ವಾ ಅವರು ಬಿಜೆಪಿ ಸೇರ್ಪಡೆಯಾಗಿ ಫಳ್ನೀರ್ ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರೋದು ಇದಕ್ಕೆ ಪೂರಕವಾಗಿದೆ. ಈಗ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರುಣ್ ಕುಯೆಲ್ಲೋ, ಮಾಜಿ ಮೇಯರ್ ಪುರಂದರದಾಸ್ ಕೂಳೂರು, ಇಂಟಕ್ನ ಶಶಿಧರ ಅಂಬಟ್ ಮತ್ತಿತರ ನಾಯಕರೊಂದಿಗೆ ಹಲವಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆ ಗೊಂಡಿರೋದರಿಂ ಕಾಂಗ್ರೆಸ್ನೊಳಗೆ ಭಿನ್ನಮತ ಸ್ಪೋಟಗೊಂಡಿರೋದು ಸ್ಪಷ್ಟವಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಪಟ್ಟಿ ಬಿಡುಗಡೆಯಾದ ಬಳಿಕ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತ ಸ್ಪೋಟಗೊಂಡು ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿತ್ತು. ಇದೀಗ ಈ ರೀತಿಯ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹೊಡೆತ ಬೀದಿದೆ ಎಂದರೆ ತಪ್ಪಗಲಾರದು..