ಮಂಗಳೂರು: ಕೊರೊನಾ ಸೋಂಕಿನಿಂದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಚೇತರಿಸಿಕೊಂಡಿದ್ದಾರೆ.
ಜನಾರ್ದನ ಪೂಜಾರಿ ಅವರಿಗೆ ಜುಲೈ 4 ರಂದು ಕೊರೊನಾ ದೃಢಪಟ್ಟಿತ್ತು. ಅವರ ಜೊತೆಗೆ ಅವರ ಕುಟುಂಬಸ್ಥರಿಗೂ ಕೊರೊನಾ ತಗುಲಿತ್ತು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಕುಟುಂಬಸ್ಥರ ಸಮೇತ ಆಸ್ಪತ್ರೆಯಿಂದ ಪೂಜಾರಿ ಡಿಸ್ಚಾರ್ಜ್ ಆಗಿ, ಬಂಟ್ವಾಳದ ಮನೆಗೆ ಆಗಮಿಸಿದ್ದಾರೆ.
ಕೊರೊನಾ ಸೋಂಕಿತರಾಗಿದ್ದ ವೇಳೆ ಅವರನ್ನು ಮತ್ತು ಕುಟುಂಬಿಕರನ್ನು ಆರೈಕೆ ಮಾಡಿದ ವೈದ್ಯ, ನರ್ಸ್, ಸಿಬ್ಬಂದಿ, ಸಂಸ್ಥೆ ಮತ್ತು ಅವರು ಗುಣಮುಖರಾಗಲೆಂದು ವಿವಿಧ ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಪ್ರಾರ್ಥಿಸಿದ ಅಭಿಮಾನಿಗಳಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕೊರೊನಾ ರೋಗಕ್ಕೆ ಯಾರೂ ಭಯಪಡಬೇಕಿಲ್ಲ, ಪ್ರತಿಯೊಬ್ಬರೂ ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಉತ್ತಮ ಪೌಷ್ಟಿಕ ಆಹಾರ ಸೇವಿಸಿ. ಪ್ರತಿಯೊಬ್ಬರು ಜಾಗ್ರತೆ ವಹಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನಾರ್ದನ ಪೂಜಾರಿ ಮನವಿ ಮಾಡಿದ್ದಾರೆ.