ಮಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟ ಬಡ ಬಿಪಿಎಲ್ ಕಾರ್ಡ್ದಾರರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಗರಿಷ್ಠ 5 ಲಕ್ಷ ರೂ. ಪರಿಹಾರ ನೀಡಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಒತ್ತಾಯ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಮುಂದಿನ ವಿಧಾನಸಭೆ ಕಲಾಪದಲ್ಲಿ ಸರ್ಕಾರದ ಗಮನಕ್ಕೆ ತರುತ್ತೇವೆ. ಪ್ರಧಾನ ಮಂತ್ರಿಯವರು ಕೋವಿಡ್ ಲಸಿಕೆ ಬಂದಲ್ಲಿ ಬಿಹಾರ ರಾಜ್ಯಕ್ಕೆ ಉಚಿತವಾಗಿ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿಯೂ ಇದೇ ರೀತಿ ಉಚಿತವಾಗಿ ಲಸಿಕೆ ನೀಡಲಿ. ರಾಜ್ಯದಲ್ಲಿ ಕೋವಿಡ್ ವಾರಿಯರ್ಸ್ಗಳಾಗಿ ದುಡಿಯುತ್ತಿರುವ ಸುಮಾರು 20 ಸಾವಿರ ಮಂದಿಯನ್ನು ಗುರುತಿಸಿ ಅವರಿಗೆ ಉಚಿತವಾಗಿ ಲಸಿಕೆ ಕೊಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಲಸಿಕೆ ಕೊಡುವಾಗ ಎಪಿಎಲ್ - ಬಿಪಿಎಲ್ ನೋಡುವ ಅವಶ್ಯಕತೆ ಇಲ್ಲ. ಆದ್ದರಿಂದ ಇಡೀ ರಾಜ್ಯದ ಜನತೆಗೆ ಉಚಿತ ಲಸಿಕೆ ಪೂರೈಕೆ ಮಾಡುವ ಬಗ್ಗೆ ಸಿಎಂ ಹಾಗೂ ಆರೋಗ್ಯ ಸಚಿವರು ತಕ್ಷಣ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.
ಎರಡನೇ ಹಂತದ ಕೋವಿಡ್ ಸೋಂಕು ಹರಡ ಬಹುದೆಂಬ ಆತಂಕದಲ್ಲಿ ಸರ್ಕಾರ ದೆಹಲಿ, ಗುಜರಾತ್, ಮುಂಬೈ ಮತ್ತಿತರ ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ಕರ್ನಾಟಕದಲ್ಲಿಯೂ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಆದರೆ, ಎರಡನೇ ಹಂತದ ಕೋವಿಡ್ ಸೋಂಕು ಎದುರಿಸಲು ರಾಜ್ಯದಲ್ಲಿ ಈವರೆಗೆ ಯಾವುದೇ ಪೂರ್ವ ತಯಾರಿ ನಡೆದಿಲ್ಲ. ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗಾಗಿ ಮೀಸಲಿಟ್ಟಿದ್ದ 50 ಶೇ. ಬೆಡ್ ವ್ಯವಸ್ಥೆ ಮರು ಪಡೆಯಲಾಗಿದೆ ಎಂದು ಹೇಳಿದರು.
ದ.ಕ. ಜಿಲ್ಲೆಯಲ್ಲಿ ಸೆಪ್ಟೆಂಬರ್ನಲ್ಲಿ 400, ಅಕ್ಟೋಬರ್ನಲ್ಲಿ 500 ಮಂದಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದರು. ಆದರೆ, ನವೆಂಬರ್ನಲ್ಲಿ ಏಕಾಏಕಿ 42 ಮಂದಿಗೆ ಅದು ಇಳಿಕೆಯಾಗಿದೆ. ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಪ್ರಕಾರ, ದಿನಕ್ಕೆ ನಾಲ್ಕು ಸಾವಿರ ಮಂದಿಗೆ ತಪಾಸಣೆ ನಡೆಯುತ್ತಿದ್ದು, ಅದರಲ್ಲಿ ಶೇ1ರಷ್ಟು ಜನರಲ್ಲಿ ಸೋಂಕು ಕಾಣಿಸುತ್ತಿದೆ. ಇದು ಸಂಪೂರ್ಣ ಸುಳ್ಳು ಮಾಹಿತಿಯಾಗಿದ್ದು, ಆ್ಯಂಟಿಜೆನ್ ಟೆಸ್ಟ್ ಬಗ್ಗೆ ಯಾರಿಗೂ ನಂಬಿಕೆ ಇಲ್ಲ. ಆರ್ಟಿಪಿಸಿಆರ್ ತಪಾಸಣೆ ವರದಿ ಬರಲು 24 ಗಂಟೆ ಬೇಕು. ಹಾಗಾಗಿ ತಕ್ಷಣ ತಪಾಸಣಾ ಪ್ರಕ್ರಿಯೆಯನ್ನು ಹೆಚ್ಚಳಗೊಳಿಸಿ ಎಂದು ಐವನ್ ಡಿಸೋಜಾ ಆಗ್ರಹಿಸಿದರು.