ಸುಬ್ರಹ್ಮಣ್ಯ : ಯಾವುದೇ ವ್ಯಕ್ತಿಯನ್ನು ಕಡೆಗಣಿಸಿ ಸಾಧನೆ ಮಾಡಬೇಕು ಎಂಬ ಮನಸ್ಥಿತಿ ನನಗಿಲ್ಲ. ಭೋಜೇಗೌಡ ಅವರ ಸಣ್ಣತನಕ್ಕೆ ನಾನು ಕಾರಣನಲ್ಲ. ಇದಕ್ಕೆ ನಾನು ಏನೂ ಮಾಡಲು ಸಾಧ್ಯವಿಲ್ಲ ಎಂದು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸಭಾಂಗಣದಲ್ಲಿ ನಡೆದ ಕೋವಿಡ್ ಪರಿಶೀಲನಾ ಸಭೆಯ ಬಳಿಕ ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಅವರು ಜಿಲ್ಲಾಧಿಕಾರಿಗಳ ಕಚೇರಿ ಬಾಗಿಲಲ್ಲಿ ನಡೆಸಿದ ಪ್ರತಿಭಟನೆ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ ಸಚಿವರು, ನಾನು ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾ ಅಧಿಕಾರಿಗಳ ವರ್ಗದ ಸಭೆ ಕರೆದಿದ್ದೆ.
ಇದಕ್ಕೆ ಎಂಪಿ, ಎಂಎಲ್ಎ, ಸದಸ್ಯರುಗಳನ್ನು ಕರೆಯುವ ಅಗತ್ಯ ಇಲ್ಲ. ನನ್ನ ಮತ್ತು ಸಂಬಂಧಿತ ಇಲಾಖೆಯ ಮಾಹಿತಿಗಾಗಿ ಮಾತ್ರ ಸಭೆ ಕರೆದಿದ್ದೆ. ಅಲ್ಲದೆ ಚಿಕ್ಕಮಗಳೂರಿನಲ್ಲಿ ಈ ತನಕ ಕೆಡಿಪಿ ಸಭೆ, ಪ್ರಗತಿ ಪರಿಶೀಲನೆ ಸಭೆಗಳು, ಉದ್ಘಾಟನೆಗಳು ನಡೆಸಿಲ್ಲ. ಅವರು ಯಾಕೆ ಧರಣಿ ಕೂತರೋ, ಯಾಕೆ ಎದ್ದು ಹೋದರೋ ನನಗೆ ಗೊತ್ತಿಲ್ಲ ಎಂದು ಸಚಿವರು ಹೇಳಿದರು.
ಅನೇಕ ಕೃಷಿಕರಿಗೆ ಸ್ವಉದ್ಯೋಗ ನೀಡುವ ನಿಟ್ಟಿನಲ್ಲಿ ಮೀನು ಮರಿಗಳನ್ನು ನೀಡುವ ಮೂಲಕ ಕೆರೆ ಮೀನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಸಚಿವ ಎಸ್. ಅಂಗಾರ ಹೇಳಿದರು.