ಮಂಗಳೂರು: ತುಳು ಭಾಷೆಗೆ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಅಧಿಕೃತ ರಾಜ್ಯ ಭಾಷೆಯ ಮಾನ್ಯತೆ ದೊರೆಯಬೇಕೆಂದು ಆಗ್ರಹಿಸಿ ನಿನ್ನೆ ನಡೆದ ತುಳು ಟ್ವೀಟ್ ಅಭಿಯಾನಕ್ಕೆ ದೇಶ-ವಿದೇಶಗಳ 4 ಲಕ್ಷಕ್ಕೂ ಅಧಿಕ ಮಂದಿ ತುಳುವರು ಟ್ವೀಟ್ ಮಾಡುವ ಮೂಲಕ ತುಳುಭಾಷೆಯ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಜೈ ತುಳುನಾಡು ಸಂಘಟನೆ ಸೇರಿದಂತೆ ಹಲವಾರು ತುಳು ಸಂಘಟನೆಗಳ ಸಾಥಿದಾರಿಕೆಯ ಮೂಲಕ #TuluOfficialinKA_KL ಎಂಬ ಹ್ಯಾಶ್ ಟ್ಯಾಗ್ ನಡಿಯಲ್ಲಿ 'ಟ್ವೀಟ್ ತುಳುನಾಡು' ಟ್ವೀಟರ್ ಅಭಿಯಾನವು ನಿನ್ನೆ ಬೆಳಗ್ಗೆ 6 ರಿಂದ ಮಧ್ಯರಾತ್ರಿ 11.59 ಗಂಟೆಯವರೆಗೆ ನಡೆದಿತ್ತು. ಈ ಮೂಲಕ ತುಳುಭಾಷೆಗೆ ಅಧಿಕೃತ ಕೇರಳ ಹಾಗೂ ಕರ್ನಾಟಕ ರಾಜ್ಯಗಳ ಅಧಿಕೃತ ರಾಜ್ಯಭಾಷೆಯ ಸ್ಥಾನಮಾನ ದೊರಕಬೇಕೆಂದು ಒಕ್ಕೊರಲಿನ ದನಿ ಎತ್ತುವ ಪ್ರಯತ್ನ ಮಾಡಲಾಗಿತ್ತು.
ಬೆಳಗ್ಗಿನಿಂದಲೇ ಟ್ವೀಟ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಳಗ್ಗೆ 9.30 ಹೊತ್ತಿಗೆ 28 ಸಾವಿರ ಟ್ವೀಟ್ಗಳಾಗಿತ್ತು. ಮಧ್ಯಾಹ್ನದ ವೇಳೆಗೆ ವರ್ಲ್ಡ್ ಟ್ರೆಂಡಿಂಗ್ ಎನಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. ರಾತ್ರಿ 11 ರ ವೇಳೆಗೆ 3.50 ಲಕ್ಷ ಮಂದಿ ಟ್ವೀಟ್ ಮಾಡಿದರೆ ಟ್ವೀಟ್ ಅಭಿಯಾನದ ಅಂತಿಮ ಹಂತಕ್ಕೆ ಅಂದರೆ ಮಧ್ಯರಾತ್ರಿ 11.59ರ ವೇಳೆಗೆ 4 ಲಕ್ಷಕ್ಕೂ ಅಧಿಕ ಮಂದಿ ಟ್ವೀಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುವಂತಾಗಿತ್ತು.
ಈ ಟ್ವೀಟ್ ಅಭಿಯಾನದಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಸಂಸದರುಗಳು, ಶಾಸಕರುಗಳನ್ನು ಟ್ಯಾಗ್ ಮಾಡಿ ಒತ್ತಾಯಿಸಲಾಗಿತ್ತು. ಸಂಸದ ನಳಿನ್ ಕುಮಾರ್ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿಯ ಶಾಸಕರುಗಳು, ಮಾಜಿ ಸಚಿವರುಗಳು, ತುಳು ಚಿತ್ರರಂಗದ ನಟ, ನಟಿಯರು ಅಲ್ಲದೆ ದೇಶ ವಿದೇಶಗಳ ತುಳುವರು, ತುಳು ಅಭಿಮಾನಿಗಳು ಟ್ವೀಟ್ ಮಾಡಿದ್ದರು. ಅಲ್ಲದೆ ಆಡಳಿತಾರೂಢ ಪಕ್ಷಗಳ ಜನಪ್ರತಿನಿಧಿಗಳನ್ನೂ ಟ್ಯಾಗ್ ಮಾಡಿ ತಕ್ಷಣಕ್ಕೆ ತುಳುಭಾಷೆ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವಂತೆ ಒತ್ತಾಯ ಮಾಡಿರುವುದು ಕಂಡು ಬಂದಿತ್ತು.
'ಒಂದಷ್ಟು ತಾಂತ್ರಿಕ ದೋಷಗಳನ್ನು ಪರಿಹರಿಸಿ, ನಮ್ಮ ಅವಧಿಯಲ್ಲಿಯೇ ರಾಜ್ಯದ ಅಧಿಕೃತ ಮಾನ್ಯತೆ ಕೊಡುವ ಪ್ರಯತ್ನ ಮಾಡಲಾಗುತ್ತದೆ' ಎಂದು ನಳಿನ್ ಕುಮಾರ್ ಟ್ವೀಟ್ ಮಾಡಿದದ್ದಾರೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು 'ತುಳು ರಾಜ್ಯದ ಆಡಳಿತಾತ್ಮಕ ಭಾಷೆಯಾಗಬೇಕು. ತುಳುವಿಗೆ ವಿಶೇಷ ಮಾನ್ಯತೆ ಸಿಗಬೇಕೆಂಬ ತುಳುನಾಡಿನ ಬಂಧುಗಳ ಹೋರಾಟಕ್ಕೆ ನನ್ನ ಬೆಂಬಲವೂ ಇದೆ' ಎಂದು ಹೇಳಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ಅವರು 'ತುಳುಭಾಷೆಗೆ ರಾಜ್ಯ ಮಾನ್ಯತೆ ದೊರಕಬೇಕೆಂಬುದು ನಮ್ಮ ಆಸೆ' ಎಂದು ಟ್ವೀಟ್ ಮಾಡಿದ್ದಾರೆ.
ಶಾಸಕ ಹರೀಶ್ ಪೂಂಜ 'ತುಳುಭಾಷೆಯು ರಾಜ್ಯಾಂಗದ ಅಧಿಕೃತ ಭಾಷೆಯಾಗಿ ಗುರುತಿಸಿಕೊಳ್ಳುವ ಕಾರ್ಯ ಆದಷ್ಟು ಶೀಘ್ರದಲ್ಲಿಯೇ ಆಗಬೇಕು' ಎಂದು ಟ್ವೀಟ್ ಮಾಡಿದ್ದಾರೆ.
ಇಂತಹ ಟ್ವೀಟ್ಗಳಿಗೆ ಟಾಂಗ್ ನೀಡಿರುವ ಚೈತು ಮಂಗಳೂರು' ಟ್ವೀಟ್ ಅಭಿಯಾನ ನಡೆಯುತ್ತಿರುವುದು ನಮ್ಮ ಹಕ್ಕೊತ್ತಾಯಗಳನ್ನು ಕ್ರೋಢೀಕರಿಸಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಸಲುವಾಗಿ. ಆದರೆ ಆಡಳಿತ ಪಕ್ಷದ ರಾಜ್ಯಾಧ್ಯಕ್ಷರಾಗಿ ಶಾಸಕರುಗಳು, ಸಚಿವರು ಟ್ವೀಟ್ ಮಾಡಿ ಕನ್ ಫ್ಯೂಸ್ ಮಾಡುತ್ತಿದ್ದಾರೆ. ಹಾಗಾದರೆ ಬೆಳಗ್ಗಿನಿಂದ ನಾವು ಟ್ವೀಟ್ ಮಾಡಿ ಒತ್ತಾಯಿಸಿದ್ದು, ವಾಸ್ಕೋಡಿಗಾಮನನ್ನೇ' ಎಂದು ಟ್ವೀಟ್ ಮೂಲಕವೇ ಟಾಂಗ್ ನೀಡಿದ್ದಾರೆ.
ಅಲ್ಲದೆ ಕೆಲವರು 'ನೀವು ಟ್ವೀಟ್ ಮಾಡುವುದು ಮಾತ್ರವಲ್ಲ, ತುಳುವಿಗೆ ಮಾನ್ಯತೆ ನೀಡುತ್ತೇವೆ ಎಂದೇಕೆ ಹೇಳುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನಮ್ಮ ಅವಧಿಯಲ್ಲೇ 'ತುಳು'ವಿಗೆ ಅಧಿಕೃತ ರಾಜ್ಯಭಾಷೆಯ ಮಾನ್ಯತೆ: ನಳಿನ್ ಕುಮಾರ್