ಮಂಗಳೂರು (ದಕ್ಷಿಣ ಕನ್ನಡ): ಕರಾವಳಿ ಪ್ರದೇಶದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ತಣ್ಣಗಾದಂತಿಲ್ಲ. ನಗರದ ಕಾಲೇಜೊಂದರಲ್ಲಿ ಮತ್ತೆ ಹಿಜಾಬ್ ವಿವಾದ ಭುಗಿಲೆದ್ದಿದೆ. ಕಾರ್ ಸ್ಟ್ರೀಟ್ನಲ್ಲಿರುವ ಡಾ.ಪಿ. ದಯಾನಂದ ಪೈ - ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿಚಾರವಾಗಿ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಸಂಘರ್ಷ ಉಂಟಾಗಿದೆ.
ನಿನ್ನೆಯೇ ಹಿಜಾಬ್ ವಿಚಾರವಾಗಿ ಎರಡು ವಿದ್ಯಾರ್ಥಿ ಗುಂಪುಗಳ ಮಧ್ಯೆ ಮಾತಿನ ಚಕಮಕಿ ಉಂಟಾಗಿತ್ತು. ಇಂದು ಪ್ರಾಂಶುಪಾಲರ ಅನುಮತಿ ಮೇರೆಗೆ ವಿದ್ಯಾರ್ಥಿನಿಯರು ಪಿನ್ ಹಾಕದೇ ಕೇವಲ ಶಾಲು ಧರಿಸಿ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಕೆಲ ವಿದ್ಯಾರ್ಥಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅವರನ್ನು ಪರೀಕ್ಷಾ ತರಗತಿಯಿಂದ ಹೊರಹೋಗಲು ತಿಳಿಸಿದ್ದಾರೆ.
ಇದನ್ನೂ ಓದಿ: ಕಡತ ವಿಲೇವಾರಿಯಾಗುವವರೆಗೆ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತಿಲ್ಲ: ಸಚಿವ ಆರ್.ಅಶೋಕ್
ಪರಿಣಾಮ ಎರಡು ವಿದ್ಯಾರ್ಥಿ ಗುಂಪುಗಳ ಮಧ್ಯೆ ವಾಗ್ವಾದ ಉಂಟಾಗಿದೆ. ಕಾಲೇಜು ಗೇಟು ಮುಂಭಾಗದಲ್ಲೇ ಪರಸ್ಪರ ಜಗಳಕ್ಕಿಳಿದಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದೆ. ಪ್ರಾಂಶುಪಾಲರ ನೇತೃತ್ವದಲ್ಲಿ ಕಾಲೇಜಿನಲ್ಲಿ ಸಭೆ ನಡೆದಿದ್ದು, ಪರಿಸ್ಥಿತಿ ತಿಳಿಯಾಗಿದೆ.