ಮಂಗಳೂರು/ಕಾರವಾರ: ನಗರದಲ್ಲಿ ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ದೇರಬೈಲ್ನ ಕುಂಟಿಕಾನ ಬಳಿ ಬೃಹತ್ ಕಂಪೌಂಡ್ ಗೋಡೆ ಕುಸಿದ ಪರಿಣಾಮ ಬೃಹತ್ ವಸತಿ ಸಮುಚ್ಛಯ ಹಾಗೂ ಒಂದೆರಡು ಮನೆಗಳು ಅಪಾಯದ ಭೀತಿಯನ್ನು ಎದುರಿಸುತ್ತಿವೆ.
ವಸತಿ ಸಮುಚ್ಛಯದ ನಿವಾಸಿಗಳನ್ನು ಮುಂಭಾಗದ ಕಟ್ಟಡದ ಅಂಗಡಿಗೆ ಸ್ಥಳಾಂತರಿಸಲಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳದವರು ಬೀಡುಬಿಟ್ಟಿದ್ದಾರೆ. ಸುಮಾರು ಮೂರು ಕಾರುಗಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿವೆ ಎಂದು ಶಂಕಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಅದೇ ರೀತಿ ನಗರದ ಹೊರವಲಯದಲ್ಲಿರುವ ಜಪ್ಪಿನಮೊಗರುವಿನಲ್ಲಿ ವಸತಿ ಸಮುಚ್ಛಯವೊಂದಕ್ಕೆ ನೀರು ನುಗ್ಗಿದೆ. ಪರಿಣಾಮ ಅಲ್ಲಿನ ಜನರು ನೀರಿನ ಮಧ್ಯೆಯೇ ಮನೆಯೊಳಗೆ ಕಾಲ ಕಳೆಯುವಂತಾಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳದಲ್ಲಿದ್ದು, ಅಪಾಯದ ಸೂಚನೆ ಕಂಡುಬಂದಲ್ಲಿ ಜನರನ್ನು ರಕ್ಷಿಸಲು ಸರ್ವ ಸನ್ನದ್ಧರಾಗಿದ್ದಾರೆ. ಸದ್ಯ ಮಳೆ ನಿಲ್ಲುವ ಯಾವುದೇ ಮುನ್ಸೂಚನೆ ಕಂಡು ಬರುತ್ತಿಲ್ಲ. ಬೆಳಗಿನಿಂದ ಇಲ್ಲಿಯವರೆಗೆ ಮೋಡ ಮುಸುಕಿದ ವಾತಾವರಣವೇ ಕಂಡು ಬರುತ್ತಿದ್ದು, ಮಳೆ ನಿರಂತರವಾಗಿ ಸುರಿಯುತ್ತಿದೆ.
ಕಾರವಾರದಲ್ಲಿಯೂ ಅವಾಂತರ ಸೃಷ್ಟಿಸಿದ ವರುಣ
ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕಡಿಮೆಯಾಗಿದ್ದ ಮಳೆ ಮತ್ತೆ ಜೋರಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಬೆಳಗ್ಗೆಯಿಂದಲೇ ಭಾರೀ ಮಳೆಯಾಗಿದೆ. ಕಡಲಿನಲ್ಲಿ ಪ್ರಕ್ಷುಬ್ಧ ವಾತಾವರಣವಿರುವ ಹಿನ್ನೆಲೆ ಮೀನುಗಾರಿಕೆಗೆ ತೆರಳಿದ ಬೋಟ್ಗಳು ವಾಪಸ್ ಆಗಿವೆ. ಸಿದ್ದಾಪುರ, ಶಿರಸಿ, ಯಲ್ಲಾಪುರ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ.