ಮಂಗಳೂರು: ಮುಂಗಾರು ಪ್ರವೇಶವಾದರೂ ಕರಾವಳಿಯಲ್ಲಿ ಕೈಕೊಟ್ಟಿದ್ದ ಮಳೆ, ನಿನ್ನೆಯಿಂದ ಬಿರುಸು ಪಡೆದಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನಿನ್ನೆ ಸಂಜೆಯ ವೇಳೆಗೆ ಅರಬ್ಬಿ ಸಮುದ್ರದಲ್ಲಿ 3.5 ರಿಂದ 4 ಮೀಟರ್ ಎತ್ತರದಲ್ಲಿ ಅಲೆಗಳು ರಭಸದಿಂದ ತೀರಕ್ಕೆ ಅಪ್ಪಳಿಸುತ್ತಿದ್ದು, ಈ ಕಡಲಬ್ಬರವು ನಾಳೆಯವರೆಗೂ ಮುಂದುವರಿಯಲಿದೆ. ಅಲ್ಲದೇ, ಮಂಗಳೂರಿನಿಂದ ಕಾರವಾರದವರೆಗೂ ಅಲೆಗಳ ಆರ್ಭಟ ಅಪಾಯಕಾರಿಯಾಗಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಈ ಹಿನ್ನೆಲೆ, ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ನೈರುತ್ಯ ಹಾಗೂ ಅರಬ್ಬಿ ಸಮುದ್ರದಲ್ಲಿ 40 ರಿಂದ 50 ಕಿ.ಮೀ.ವರೆಗೆ ಬಿರುಗಾಳಿ ಬೀಸಲಿದೆ. ಇದೇ ರೀತಿ, ಜುಲೈ 13ರವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ ಮೀನುಗಾರಿಕೆ ಸಂಪೂರ್ಣ ನಿಷೇಧಿಸಲಾಗಿದ್ದು, ಮೀನುಗಾರರು ಕಡಲಿಗಿಳಿಯದಂತೆ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.