ಮಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ ರೇಪಿಸ್ಟ್ಗಳನ್ನು ರಕ್ಷಣೆ ಮಾಡುತ್ತಿದೆ. ಕೂಡಲೇ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಭಾವಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಮೇಲೆ ಸಂತ್ರಸ್ತ ಮಹಿಳೆ ವಿಡಿಯೋ ಮೂಲಕ ಆಪಾದನೆ ಮಾಡಿದ್ದಾರೆ. ಅವರ ವಿರುದ್ದ ಸೆಕ್ಷನ್ 376 ವಿಧಿಯಡಿ ದಾವೆ ಹೂಡಿದರೂ ಅವರನ್ನು ಬಂಧಿಸಿಲ್ಲ. ಸರ್ಕಾರ ರೇಪಿಸ್ಟ್ಗಳನ್ನು ರಕ್ಷಣೆ ಮಾಡುತ್ತಿದ್ದು, ಎಸ್ಐಟಿ ತಂಡ ಕೂಡ ಅವರ ಬಂಧನಕ್ಕೆ ಮುಂದಾಗುತ್ತಿಲ್ಲ. ರಮೇಶ್ ಜಾರಕಿಹೊಳಿ ರಾಜಾರೋಷವಾಗಿ ಓಡಾಡುತ್ತಿದ್ದು, ಅವರನ್ನು ಬಂಧಿಸಿ ಸಂತ್ರಸ್ತ ಮಹಿಳೆಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಭೇಟಿ ನೀಡಿದಾಗ ಅವರ ಮೇಲೆ ರಮೇಶ್ ಜಾರಕಿಹೊಳಿ ಬೆಂಬಲಿಗರು ಗೂಂಡಾಗಿರಿ ನಡೆಸಿದ್ದರು. ಈ ಘಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಗೂಂಡಾಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು. ಹಿಂದೆ ಬಳ್ಳಾರಿಯಲ್ಲಿ ನಡೆಯುತ್ತಿದ್ದ ಗೂಂಡಾಗಿರಿ ಇದೀಗ ಬೆಳಗಾವಿಯಲ್ಲಿ ನಡೆಯುತ್ತಿದೆ. ಅದನ್ನೆಲ್ಲ ಮೆಟ್ಟಿ ನಿಲ್ಲುವ ಶಕ್ತಿ ಕಾಂಗ್ರೆಸ್ಗಿದೆ ಎಂದರು.
ಓದಿ: ಸಿಡಿ ಪ್ರಕರಣ:ಮಾಜಿ ಶಾಸಕ ನಾಗರಾಜ್, ವಕೀಲರ ಜೊತೆ ವಿಚಾರಣೆಗೆ ಆಗಮಿಸಿದ ಜಾರಕಿಹೊಳಿ