ಮಂಗಳೂರು: ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟಗಳು ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಸುರತ್ಕಲ್ನ ಎನ್ಐಟಿಕೆಯು ತನ್ನ ಸಮುದಾಯ ಸೇವಾ ಭಾಗವಾಗಿ ಸುರತ್ಕಲ್ ಪರಿಸರದಲ್ಲಿ ಉಚಿತವಾಗಿ ಹ್ಯಾಂಡ್ ಸ್ಯಾನಿಟೈಸರ್ಗಳನ್ನು ವಿತರಿಸಿತು.
ಎನ್ಐಟಿ ಕೆಯ ರಸಾಯನ ಶಾಸ್ತ್ರ ವಿಭಾಗದ ಡಾ. ಅರುಣ್ ಇಸ್ಲೂರ್ ಹಾಗೂ ಸ೦ಶೋಧನಾ ವಿಭಾಗದ ವಿದ್ಯಾರ್ಥಿಗಳಾದ ಸಯ್ಯದ್ ಇಬ್ರಾಹಿಂ ಹಾಗೂ ಹರ್ಷ ಅವರುಗಳ ಸಹಕಾರದೊಂದಿಗೆ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಅಭಿವೃದ್ಧಿಪಡಿಸಲಾಯಿತು. ಸ್ಯಾನಿಟೈಸರ್ ತಯಾರಿಕೆಯ ಕುರಿತು ಮಾತನಾಡಿದ ಡಾ. ಅರುಣ್ ಇಸ್ಲೂರ್, ವಿಶ್ವದಾದ್ಯಂತ ಸ್ಯಾನಿಟೈಸರ್ಗಳಿಗೆ ಬೇಡಿಕೆ ಹೆಚ್ಚಾದ ಕಾರಣ ಹಾಗೂ ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್ಗಳು ಲಭ್ಯವಿಲ್ಲದೇ ಇರುವುದು ಮತ್ತು ಲಭ್ಯವಿರುವ ಸ್ಯಾನಿಟೈಸರ್ಗಳ ಬೆಲೆ ದುಬಾರಿ ಹಾಗೂ ಅವುಗಳ ಕಾರ್ಯದಕ್ಷತೆಯ ವಿಶ್ವಾಸಾರ್ಹ ಪರೀಕ್ಷೆಗಳು ನಡೆಯದೇ ಇರುವುದನ್ನು ಮನಗಂಡು ಎನ್ ಐ ಟಿ ಕೆಯಲ್ಲಿ ಸ್ಯಾನಿಟೈಸರ್ಗಳನ್ನು ತಯಾರಿಸಲಾಗಿದೆ. ವಿಶ್ವ ಆರೋಗ್ಯ ಸ೦ಸ್ಥೆ ನಿಗದಿಪಡಿಸಿರುವ ಪ್ರಮಾಣದಲ್ಲಿ ಆಲ್ಕೋಹಾಲ್, ಡಿಸ್ಟಿಲ್ಡ್ ವಾಟರ್, ಹೈಡ್ರೋಜನ್ ಮುಂತಾದ ಕಚ್ಛಾ ವಸ್ತುಗಳನ್ನು ಬಳಸಿ ಹ್ಯಾಂಡ್ ಸ್ಯಾನಿಟೈಸರ್ಗಳನ್ನು ತಯಾರಿಸಲಾಗಿದ್ದು, ಉತ್ತಮ ಗುಣಮಟ್ಟವನ್ನು ಹೊಂದಿವೆ ಎಂದು ಮಾಹಿತಿ ನೀಡಿದರು.
ದ್ವಿತೀಯ ಹಂತದಲ್ಲಿ ಸುಮಾರು 1000 ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಉತ್ಪಾದಿಸುವ ನಿರೀಕ್ಷೆ ಇದ್ದು, ಅವುಗಳನ್ನು ಪತ್ರಕರ್ತರು, ಪೊಲೀಸ್ ಕಮಿಷನರ್, ಸಿಬ್ಬಂದಿ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರ್ಯನಿರ್ವಹಿಸುತ್ತಿರುವ ಪೆಟ್ರೋಲ್ ಬಂಕ್ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ವಿತರಿಸುವ ಯೋಜನೆಯಾಗಿದೆ ಎಂದು ತಿಳಿಸಿದರು. ಪ್ರಥಮ ಹಂತದಲ್ಲಿ 70 ಎಂಎಲ್ ನ 390 ಬಾಟಲಿ ಸ್ಯಾನಿಟೈಸರ್ಗಳನ್ನು ಎನ್ ಐ ಟಿ ಕೆ ನಿರ್ದೇಶಕರಾದ ಉಮಾಮಹೇಶ್ವರ್ ರಾವ್ ಮತ್ತು ಕೇಂದ್ರಿಯ ವಿದ್ಯಾಲಯ ಮಂಗಳೂರು-2 ಇದರ ಪ್ರಾಂಶುಪಾಲೆ ನೀರಜಾ ರಾವ್ ಬಿಡುಗಡೆಗೊಳಿಸಿದರು.
ಸ್ಯಾನಿಟೈಸರ್ಗಳನ್ನು ಎನ್ ಐ ಟಿ ಕೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಎನ್ ಐ ಟಿ ಕೆ ಮೆಡಿಕಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಹಾಗೂ ಸುರತ್ಕಲ್ ಪೊಲೀಸ್ ಠಾಣಾ ಸಿಬ್ಬಂದಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಫ್ರೋ ಎಂ. ಎಸ್ ಭಟ್, ಪ್ರೋ. ಶ್ರೀಪತಿ ಆಚಾರ್ಯ, ಸುಭಾಷ್ ಯಾರಗಲ್, ಡೆಪ್ಯುಟಿ ರಿಜಿಸ್ಟ್ರಾರ್ ಶ್ರೀರಾಮ್ ಮೋಹನ್, ರಿಜಿಸ್ಟ್ರಾರ್ಗಳಾದ ರವೀಂದ್ರನಾಥ್, ಮುರಳೀಧರ ಕುಲಕರ್ಣಿ ಉಪಸ್ಥಿತರಿದ್ದರು.