ಮಂಗಳೂರು : ಲಾಕ್ಡೌನ್ ಸಂದರ್ಭದಲ್ಲಿ ಕೋಕೋ ಹಾಗೂ ಅಡಿಕೆ ಖರೀದಿಗೆ ಕ್ಯಾಂಪ್ಕೊ ತಕ್ಷಣ ವ್ಯವಸ್ಥೆ ಮಾಡಿದ ಪರಿಣಾಮ ಬೆಳೆ ನಾಶ ತಪ್ಪಿದೆ. ಉತ್ಪನ್ನಗಳಿಗೆ ಉತ್ತಮ ಬೆಲೆ ಒದಗಿಸಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಿಬ್ಬಂದಿ ಕೂಡಾ ಲಾಕ್ಡೌನ್ನಲ್ಲಿ ರೈತರಿಗೆ ಸೇವೆ ನೀಡಿದರು. ಕೋಕೋ ಹಣ್ಣಾಗುವ ಸಮಯದಲ್ಲೇ ಲಾಕ್ಡೌನ್ ಆರಂಭವಾಯಿತು ಎಂದರು.
ಹಾಗೆಯೇ ಕೋಕೋ ಒಣಗಿಸುವ ಕೇಂದ್ರಗಳಾದ ತಮಿಳುನಾಡಿನ ಧಾರಾಪುರಂ ಹಾಗೂ ತುಮಕೂರಿನ ಶಿರಾಗೆ ಕೋಕೋ ಕಳುಹಿಸಲು ಕಷ್ಟವಾಯಿತು. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ ಪರಿಣಾಮ ಯಾವುದೇ ತೊಂದರೆ ಉಂಟಾಗಲಿಲ್ಲ. ಅಲ್ಲದೆ ನಮ್ಮ ಸದಸ್ಯರಿಗೂ ತಂತ್ರಜ್ಞಾನದ ಮೂಲಕ ಕೋಕೋ ಒಣಗಿಸುವುದರ ಕುರಿತು ಜಾಲತಾಣಗಳ ಮೂಲಕ ಕಲಿಸಿದೆವು. ನಂತರ ಕೋಕೋ ಖರೀದಿಸುತ್ತೇವೆ ಎಂದು ರೈತರಿಗೆ ಧೈರ್ಯ ತುಂಬಿದೆವು ಎಂದರು.
ಇದರಿಂದ ಕೋಕೋ ನಾಶ ಆಗುವುದನ್ನು ತಪ್ಪಿಸಲು ಸಾಧ್ಯವಾಯಿತು. ಏಪ್ರಿಲ್ 9ರ ಬಳಿಕ ಜಿಲ್ಲೆಯ ಆಯ್ದ 9 ಕೇಂದ್ರಗಳಲ್ಲಿ ಕೋಕೋ ಖರೀದಿಸಲು ಜಿಲ್ಲಾಡಳಿತ ಅನುಮತಿ ನೀಡಿತು. ಆ ಸಂದರ್ಭದಲ್ಲಿ ಕೆಜಿಗೆ ₹250 ಕೊಟ್ಟು ಅಡಿಕೆ ಖರೀದಿ ಮಾಡಲಾಯಿತು. ಇದರಿಂದ ರೈತರಿಗೆ ವಿಶ್ವಾಸ ಹೆಚ್ಚಾಯಿತು ಎಂದರು.
ಕೂಲಿ ಕಾರ್ಮಿಕರ ಕೊರತೆ ಇತ್ತು. ರೈತರಿಗೇ ಕ್ಯಾಂಪ್ಕೊ ಗುರುತಿನ ಚೀಟಿಗಳನ್ನು ನೀಡಿದ್ದರಿಂದ ರೈತರು, ಪೇಟೆಗೆ ಬಂದು ಅಡಿಕೆ, ಕೋಕೋಗಳನ್ನು ನಮಗೆ ನೀಡಲು ಸಾಧ್ಯವಾಯಿತು. ಇಂದು ಹೊಸ ಅಡಿಕೆ ದರ ₹300 (ಕೆಜಿಗೆ) ಇದ್ದು, ಹಳೆಯ ಅಡಿಕೆ ದರ ₹320ಕ್ಕೆ ಏರಿದೆ ಎಂದು ಅವರು ಮಾಹಿತಿ ನೀಡಿದರು.