ಮಂಗಳೂರು : ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿನ ಬೆಡ್ಗಳು, ವೆಂಟಿಲೇಟರ್ ಭರ್ತಿಯಾಗಿದ್ದು, ಪ್ರಸ್ತುತ ಸೋಂಕಿತರನ್ನು ಜಿಲ್ಲಾಡಳಿತ ಯಾವ ಆಸ್ಪತ್ರೆಗಳಿಗೆ ಕಳುಹಿಸುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಎಷ್ಟು ಬೆಡ್ಗಳು ಲಭ್ಯವಿದೆ ಎಂದು ಡಿಹೆಚ್ಒ, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಲೆಕ್ಕ ಕೊಡಲಿ ಎಂದು ಮಾಜಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಬೆಡ್ಗಳು ಖಾಲಿಯಿವೆ ಎಂಬ ಅಂಕಿಅಂಶಗಳ ಬಗ್ಗೆ ಜನಸಾಮಾನ್ಯರಿಗೆ ಜಿಲ್ಲಾಡಳಿತ ಮಾಹಿತಿ ನೀಡಬೇಕು. ಈ ಬಗ್ಗೆ ಪತ್ರಿಕಾ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ರೋಗಿಗಳನ್ನು ನಿರ್ಲಕ್ಷ್ಯ ಮಾಡಿದಂತಾಗಲಿದೆ. ನಿಮ್ಮ ಆರೋಗ್ಯ ಸಚಿವರು ಕೊರೊನಾದಿಂದ ರಾಜ್ಯವನ್ನು ದೇವರೇ ಕಾಪಾಡಬೇಕು ಎಂದಿದ್ದಾರೆ. ಆದರೆ, ಸರ್ಕಾರದ ಪ್ರಯತ್ನ ಬೇಡವೇ? ಎಂದು ಪ್ರಶ್ನಿಸಿದ ಅವರು, ಇದರಿಂದ ಜನರಿಗೆ ಕೋವಿಡ್ ಸೋಂಕಿನ ಬಗ್ಗೆ ಭಯ ಇಮ್ಮಡಿಯಾಗುತ್ತದೆ ಎಂದರು.
ಕಳೆದ ನಾಲ್ಕು ತಿಂಗಳ ಹಿಂದೆಯೇ ಕೊರೊನಾ ಸೋಂಕಿತರಿಗೆ ಎಷ್ಟು ಬೆಡ್ಗಳನ್ನು ಮೀಸಲಿರಿಸಬೇಕೆಂದು ಚರ್ಚೆ ನಡೆದಿತ್ತು. ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ 270-280 ಬೆಡ್ಗಳು ಮಾತ್ರ ಇದೆ. ಮೆಡಿಕಲ್ ಕಾಲೇಜುಗಳಲ್ಲಿ ಸೋಂಕಿತರ ಐಸೊಲೇಷನ್ಗಾಗಿ ಶೇ.50 ರಷ್ಟು ಬೆಡ್ ಮೀಸಲಿಡಬೇಕೆಂದು ಚರ್ಚೆ ನಡೆದಿತ್ತು. ಅಲ್ಲದೆ, ಜಿಲ್ಲೆಯ ಇನ್ನಿತರ ಖಾಸಗಿ ಆಸ್ಪತ್ರೆಗಳಲ್ಲಿ ಕೂಡಾ ಇಂತಿಷ್ಟು ಬೆಡ್ಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕೆಂದು ತೀರ್ಮಾನ ಕೈಗೊಳ್ಳಲಾಗಿತ್ತು.
ಆದ್ದರಿಂದ ತಕ್ಷಣ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಎಷ್ಟು ಬೆಡ್ಗಳು ಖಾಲಿಯಿದೆ ಎಂಬ ಮಾಹಿತಿ ನೀಡಿ. ಇಲ್ಲದಿದ್ದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಆಸ್ಪತ್ರೆಯ ಮುಂದೆ ಕುಳಿತು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.