ಮಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಚುನಾವಣಾ ಕಣಕ್ಕೆ ಇಳಿದಿರುವ ಕುಸುಮಾ ಅವರು ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ತಮ್ಮ ಗಂಡನ ಹೆಸರು ಹೇಳಬಾರದೆಂದು ಹೇಳಿರುವ ಶೋಭಾ ಕರಂದ್ಲಾಜೆಯವರ ಮಾತು ಭಾರತೀಯ ಮಹಿಳೆಯರಿಗೆ ಮಾಡಿರುವ ಅವಮಾನ ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಕಿಡಿಕಾರಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕುಸುಮಾ ತಮ್ಮ ಗಂಡ ಡಿ.ಕೆ.ರವಿಯವರ ಹೆಸರು ಹೇಳಬಾರದೆಂದು ಹೇಳಲು ಶೋಭಾ ಕರಂದ್ಲಾಜೆಗೂ ರವಿಗೂ ಏನು ಸಂಬಂಧ. ಇಲ್ಲಿಯ ಶೋಭಾರಿಗೆ ಅಲ್ಲಿಯ ರವಿಯ ವಿಚಾರ ಯಾಕೆ. ಭಾರತೀಯ ಪರಂಪರೆ ಪ್ರಕಾರ ಹೆಣ್ಣು ಮದುವೆ ಆಗುವವರೆಗೆ ಇಂಥವರ ಮಗಳು, ಮದುವೆ ಆದ ಬಳಿಕ ಇಂಥವರ ಹೆಂಡತಿ ಎಂದು ಹೇಳುವುದು ಸಂಪ್ರದಾಯ.
ರಾಜಕೀಯ ಕ್ಷೇತ್ರದಲ್ಲಿ ಕೆಲವರು ಮಾತ್ರ ಗಂಡನ ಒಪ್ಪಿಗೆ ಪಡೆದುಕೊಂಡು ಚುನಾವಣಾ ಕಣಕ್ಕೆ ಇಳಿಯುತ್ತಾರೆ. ಹೆಚ್ಚಿನವರು ಗಂಡ ಮೃತಪಟ್ಟ ಬಳಿಕ ಗಂಡನ ಹೆಸರಿನ ಮೂಲಕ ಚುನಾವಣೆ ಎದುರಿಸಿ ಗೆದ್ದವರು ಇರೋದು. ಕುಸುಮಾ ಅವರು ಐಎಎಸ್ ಅಧಿಕಾರಿಯಾಗಿ ಅದೇ ಜಿಲ್ಲೆಯಲ್ಲಿದ್ದರೆ, ಅವರು ಗಂಡನ ಹೆಸರು ಹೇಳಬೇಡಿ ಎಂದು ಹೇಳುವುದಕ್ಕೊಂದು ಅರ್ಥ ಇತ್ತು. ಕುಸುಮಾ ಎಲ್ಲರ ಅನುಮತಿಯಿಂದ ಮದುವೆಯಾದವರು. ಆದ್ದರಿಂದ ಅವರು ಧೈರ್ಯವಾಗಿ ಗಂಡನ ಹೆಸರು ಬಳಸಬಹುದು. ಅವರೊಂದಿಗೆ ನಾವಿದ್ದೇವೆ ಎಂದರು.
ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಮಾತನಾಡಿ, ಐಎಎಸ್ ಅಧಿಕಾರಿ ಡಿ.ಕೆ.ರವಿಯವರ ಪತ್ನಿ ಕುಸುಮಾ ಅವರು ಚುನಾವಣೆ ಸಂದರ್ಭದಲ್ಲಿ ತಮ್ಮ ಗಂಡನ ಹೆಸರನ್ನು ಬಳಸಬಾರದು ಎಂದು ಶೋಭಾ ಕರಂದ್ಲಾಜೆಯವರು ಹೇಳುತ್ತಿರುವುದು ಖಂಡನೀಯ. ಮಹಿಳೆಯರಿಗೆ ವಿಧಾನಸಭೆಯಲ್ಲಿ ಆದ್ಯತೆ ಕೊಡುವ ನಿಟ್ಟಿನಲ್ಲಿ ಕುಸುಮಾರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಆದರೆ, ಶೋಭಾ ಅವರು ಮಹಿಳೆಯಾಗಿಯೂ ಇನ್ನೊಬ್ಬ ಮಹಿಳೆಯ ಬಗ್ಗೆ ಬಹಳ ಕೀಳಾಗಿ ಮಾತನಾಡಿದ್ದಾರೆ. ಗಂಡನನ್ನು ಕಳೆದುಕೊಂಡ ಮಹಿಳೆಯ ದುಃಖ ಬಹುಶಃ ಶೋಭಾ ಕರಂದ್ಲಾಜೆಯವರಿಗೆ ತಿಳಿದಿಲ್ಲ.
ಶೋಭಾ ಅವರು ಭಾವನಾತ್ಮಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ಅಭಿವೃದ್ಧಿ ವಿಚಾರವಾಗಿ ಮಾತನಾಡುತ್ತಿಲ್ಲ. ದೇಶದಲ್ಲಿ ಇತ್ತೀಚೆಗೆ ಮಹಿಳೆಯರ ಮೇಲೆ ಸಾಕಷ್ಟು ಅತ್ಯಾಚಾರಗಳು ಪ್ರಕರಣಗಳು ನಡೆದಿವೆ. ಆದರೆ ಶೋಭಾ ಅವರು ಈ ವಿಚಾರವಾಗಿ ಚಕಾರ ಎತ್ತಿಲ್ಲ. ಆದ್ದರಿಂದ ಶೋಭಾ ಅವರು ಇನ್ನೊಬ್ಬ ಮಹಿಳೆಯ ಬಗ್ಗೆ ತುಚ್ಛವಾಗಿ ಮಾತನಾಡುವುದನ್ನು ಕೈಬಿಡಲಿ. ಅಲ್ಲದೇ ವೈಯಕ್ತಿಕವಾಗಿ ಮಾತನಾಡುವುದು ಒಳ್ಳೆಯ ರಾಜಕೀಯ ಅಲ್ಲ ಎಂದು ಹೇಳಿದರು.