ಬಂಟ್ವಾಳ: ಕೊರೊನಾ ವೈರಸ್ ಬಿಕ್ಕಟ್ಟಿನಲ್ಲೂ ಪೆಟ್ರೋಲ್, ಡೀಸೆಲ್ ದರವನ್ನು ಸತತ ನಾಲ್ಕು ಬಾರಿ ಏರಿಸಿರುವುದಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತೈಲ ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀರಾ ಕಡಿಮೆಯಾಗಿದ್ದರೂ ದರ ಹೆಚ್ಚಿಸಿರುವುದು ಮೋದಿ ಅಭಿಮಾನಿಗಳಿಗೆ ಹೊರತುಪಡಿಸಿ, ಉಳಿದವರೆಲ್ಲರಿಗೂ ತೊಂದರೆಯಾಗಿದೆ ಎಂದು ಆರೋಪಿಸಿದರು.
ಯುಪಿಎ ಸರ್ಕಾರವಿದ್ದಾಗ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಜಾಸ್ತಿ ಇದ್ದಾಗಲೂ ಪೆಟ್ರೋಲ್, ಡೀಸೆಲ್ ದರ ನಿಯಂತ್ರಣದಲ್ಲಿತ್ತು ಎಂದು ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಸಮರ್ಥಿಸಿಕೊಂಡರು.
ಜನರ ನೋವನ್ನು ಅರ್ಥ ಮಾಡಿಕೊಳ್ಳದಂಥ ಕೇಂದ್ರ ಸರ್ಕಾರ, ದಿನಬಳಕೆಯ ವಸ್ತುಗಳಿಗೆ ದರ ಜಾಸ್ತಿಯಾಗುವಂಥ ಸನ್ನಿವೇಶವನ್ನು ಸೃಷ್ಟಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.