ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಭಾಯಿಸಲು ಬೆಂಗಳೂರಿನಂತೆ ಸೂಕ್ತ ಸ್ಥಳ ಗುರುತಿಸಿ ತಾತ್ಕಾಲಿಕವಾಗಿ 1500 ಬೆಡ್ಗಳ ಕೋವಿಡ್ ಆಸ್ಪತ್ರೆ ಪ್ರಾರಂಭಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಮಂಗಳೂರಿನಲ್ಲಿ ಅಧಿಕವಾಗುತ್ತಿದ್ದು, ನಿಯಂತ್ರಣಕ್ಕೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಪರೋಕ್ಷವಾಗಿ ಕೈಚೆಲ್ಲಿ ಕುಳಿತಿವೆ. ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಅದೇ ರೀತಿ ಜಿಲ್ಲೆಗೂ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ವೆನ್ಲಾಕ್ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ ಬಳಿಕ ಇತರ ರೋಗಿಗಳಿಗೆ ವೈದ್ಯಕೀಯ ಸೌಲಭ್ಯಗಳೂ ಸಿಗುತ್ತಿಲ್ಲ. ಹೀಗಾಗಿ ಸಾಕಷ್ಟು ಮಂದಿ ಬಲಿಯಾಗಿದ್ದಾರೆ. ಅದಕ್ಕಾಗಿ ಕೋವಿಡ್ ಸೋಂಕು ಚಿಕಿತ್ಸೆಗಾಗಿ ತಾತ್ಕಾಲಿಕವಾಗಿ ಪ್ರತ್ಯೇಕ ಆಸ್ಪತ್ರೆ ಮಾಡಲಿ ಎಂದು ಹೇಳಿದರು.
ಕೊರೊನಾ ನಿಭಾಯಿಸುವಲ್ಲಿ ದೇಶದಲ್ಲಿಯೇ ಕರ್ನಾಟಕ ಮಾದರಿ ಎಂದು ಕೇಂದ್ರ ಸಚಿವರು ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರವೇ ಇರುವ ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶಗಳನ್ನು ಹೇಳಲಾಗದ ಕಾರಣ ಕರ್ನಾಟಕ ಮಾದರಿ ಎನ್ನುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.