ಮಂಗಳೂರು : ಕರಾವಳಿಯ ಪ್ರಮುಖ ವಾಣಿಜ್ಯ ವಹಿವಾಟು 'ಮತ್ಸೋದ್ಯಮ' ಈ ಬಾರಿ ಸಂಕಷ್ಟದಲ್ಲಿಯೇ ಮುಕ್ತಾಯ ಕಂಡಿದೆ. ಕೊರೊನಾ, ಚಂಡಮಾರುತ, ಡೀಸೆಲ್ ಬೆಲೆ ಏರಿಕೆ ಈ ಬಾರಿ ಮೀನುಗಾರಿಕೆಗೆ ದೊಡ್ಡ ಹೊಡೆತ ನೀಡಿದೆ. ಇದರಿಂದಾಗಿ ಮೀನುಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೀನುಗಾರಿಕೆಯ ಋತು ಆಗಷ್ಟ್ನಲ್ಲಿ ಆರಂಭವಾಗಿ ಮೇ ತಿಂಗಳಲ್ಲಿ ಅಂತ್ಯವಾಗುತ್ತದೆ. ಕಡಲಿನ ಅಬ್ಬರ, ಮೀನುಗಳ ಸಂತಾನೋತ್ಪತ್ತಿ ಕಾರಣದಿಂದ ಜೂನ್ ಮತ್ತು ಜುಲೈನಲ್ಲಿ ಆಳಸಮುದ್ರ ಮೀನುಗಾರಿಕೆಗೆ ನಿಷೇಧವಿದೆ.
ಆಗಷ್ಟ್ನಿಂದ ಆರಂಭವಾಗುವ ಆಳಸಮುದ್ರ ಮೀನುಗಾರಿಕೆ ಮೇನಲ್ಲಿ ಅಂತ್ಯವಾಗುವಾಗ ಮಂಗಳೂರಿನ ಮೀನುಗಾರಿಕಾ ಬಂದರಿನ ಮೂಲಕ ಕೋಟ್ಯಂತರ ರೂ. ವಹಿವಾಟು ಆಗುತ್ತದೆ. ಆದರೆ, ಈ ಬಾರಿ ಮೀನುಗಾರಿಕೆ ವಹಿವಾಟಿನ ಮೇಲೆ ತೀವ್ರ ಹೊಡೆತ ಬಿದ್ದಿದೆ.
ಇಂದಿಗೆ ಈ ಬಾರಿಯ ಮೀನುಗಾರಿಕಾ ಋತು ಮುಕ್ತಾಯವಾಗಲಿದ್ದು, ಜೂನ್ 1ರಿಂದ ಜುಲೈ 30ವರೆಗೆ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಇರಲಿದೆ. ಈ ಬಾರಿಯ ಮೀನುಗಾರಿಕಾ ಋತುವಿನ ಮೇಲೆ ಎರಡು ಚಂಡಮಾರುತ ದುಷ್ಪರಿಣಾಮ ಬೀರಿದೆ.
ಸೆಪ್ಟೆಂಬರ್ ವೇಳೆಗೆ ಬಂದ ಚಂಡಮಾರುತ ಮತ್ತು ಮೇ ತಿಂಗಳಲ್ಲಿ ಬಂದ ತೌಕ್ತೆ ಮತ್ತು ಯಾಸ್ ಚಂಡಮಾರುತದಿಂದ ಹಲವು ದಿನಗಳ ಕಾಲ ಮೀನುಗಾರಿಕೆ ನಡೆಸಲು ಸಾಧ್ಯವಾಗಿರಲಿಲ್ಲ.
ಪ್ರತಿವರ್ಷ ಆಗಷ್ಟ್ನಲ್ಲಿ ಮೀನುಗಾರಿಕೆ ಆರಂಭವಾದರೆ ಈ ಋತುವಿನಲ್ಲಿ ಕೊರೊನಾ ಮೊದಲನೆ ಅಲೆಯ ಕಾರಣದಿಂದ ಸೆಪ್ಟೆಂಬರ್ನಲ್ಲಿ ಆರಂಭವಾಗಿತ್ತು. ಮೇ ತಿಂಗಳಲ್ಲಿ ಮುಕ್ತಾಯವಾಗುವ ಮೀನುಗಾರಿಕೆ ಕೊರೊನಾ ಎರಡನೇ ಅಲೆಯ ಕಾರಣದಿಂದಾಗಿ ಮಾರ್ಚ್ ತಿಂಗಳಲ್ಲಿ ಮುಕ್ತಾಯಗೊಂಡಿದೆ.
ಕೊರೊನಾ ಕಾರಣದಿಂದ ಹೊರಜಿಲ್ಲೆ, ಹೊರರಾಜ್ಯದ ಮೀನುಗಾರಿಕಾ ಕಾರ್ಮಿಕರು ಊರಿಗೆ ತೆರಳಿದ ಕಾರಣ ಕಾರ್ಮಿಕರ ಕೊರತೆಯಿಂದಾಗಿ ಹೆಚ್ಚಿನ ಬೋಟ್ಗಳು ಮೀನುಗಾರಿಕೆಗೆ ತೆರಳಿಲ್ಲ. ಇದರ ನಡುವೆ ಡೀಸೆಲ್ ಬೆಲೆ ಏರಿಕೆಯಿಂದ ನಷ್ಟದ ಭೀತಿಯಿಂದ ನೂರಾರು ಬೋಟ್ಗಳು ಈ ಬಾರಿ ಮೀನುಗಾರಿಕೆಯನ್ನು ನಡೆಸಿಲ್ಲ.
ಮಂಗಳೂರು ಮೀನುಗಾರಿಕಾ ಬಂದರು ಮೂಲಕ 1,200 ಆಳಸಮುದ್ರ, ಪರ್ಸಿನ್, ಟ್ರಾಲ್ ಬೋಟ್ಗಳು ಕಾರ್ಯಾಚರಿಸುತ್ತಿವೆ. ಇದರಲ್ಲಿ 15 ಸಾವಿರ ಮಂದಿ ನೇರವಾಗಿ ದುಡಿಯುತ್ತಿದ್ದರೆ, 15 ಸಾವಿರ ಮಂದಿ ಪರೋಕ್ಷವಾಗಿ ದುಡಿಯುತ್ತಿದ್ದಾರೆ.
ಮೀನುಗಾರಿಕೆ ಅವಲಂಬಿಸಿ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ, ಈ ಬಾರಿಯ ಮೀನುಗಾರಿಕಾ ಋತುವಿನಲ್ಲಿ ಕೊರೊನಾ, ಚಂಡಮಾರುತ, ಡೀಸಲ್ ಬೆಲೆ ಹೆಚ್ಚಳ ದುಷ್ಪರಿಣಾಮ ಬೀರಿದೆ. ಈ ಕಾರಣದಿಂದ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಮೀನುಗಾರರಿದ್ದಾರೆ.
ಓದಿ: ಇನ್ನೂ 14 ದಿನ ಲಾಕ್‌ಡೌನ್ ವಿಸ್ತರಣೆ?: ಬಿಎಸ್‌ವೈ ಕೈಸೇರಿದ ಕೋವಿಡ್ ತಾಂತ್ರಿಕ ಸಮಿತಿ ವರದಿ