ಮಂಗಳೂರು: ಮಂಗಳೂರು ವಿಮಾನ ನಿಲ್ದಾಣವನ್ನು ನಿರ್ವಹಣೆಗಾಗಿ ಗುತ್ತಿಗೆ ಪಡೆದಿರುವ ಅದಾನಿ ಸಂಸ್ಥೆ, ನಾಮಫಲಕದಲ್ಲಿ ತಮ್ಮ ಸಂಸ್ಥೆ ಹೆಸರು ಹಾಕುವ ಮೂಲಕ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ಮಂಗಳೂರಿನ ಯುವ ತುಳುನಾಡು ಸಂಸ್ಥೆ, ವಿಮಾನ ಪ್ರಾಧಿಕಾರಕ್ಕೆ ಎರಡನೇ ಬಾರಿಗೆ ವಕೀಲರ ಮೂಲಕ ಆರ್ಟಿಐಯಲ್ಲಿ ಮಾಹಿತಿ ಕೇಳಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯ್ಯ, ತುಳುನಾಡು ಏರ್ಪೋರ್ಟ್ ಹೆಸರನ್ನು ಇಡಬೇಕೆಂಬುದು ಹಲವು ವರ್ಷಗಳ ಬೇಡಿಕೆ. ಈ ಮಧ್ಯೆ ಈ ವಿಮಾನ ನಿಲ್ದಾಣವನ್ನು ನಿರ್ವಹಣೆಗಾಗಿ ಅದಾನಿ ಸಂಸ್ಥೆಗೆ ಕೇಂದ್ರ ಸರ್ಕಾರ ಗುತ್ತಿಗೆ ನೀಡಿತ್ತು. ಗುತ್ತಿಗೆ ಆರಂಭವಾದ ಮೊದಲ ದಿನ ಮಂಗಳೂರು ವಿಮಾನ ನಿಲ್ದಾಣದ ನಾಮಫಲಕದಲ್ಲಿ ಅದಾನಿ ಹೆಸರನ್ನು ಹಾಕುವ ಮೂಲಕ ತುಳುವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದರೂ ಕೂಡ ಅದಾನಿ ಸಂಸ್ಥೆ ಹೆಸರು ಬದಲಾಯಿಸಲು ಮುಂದಾಗಿರಲಿಲ್ಲ.
ಈ ನಡುವೆ ಯುವ ತುಳುನಾಡು ಸಂಸ್ಥೆ ಮೂಲಕ ದಿಲ್ ರಾಜ್ ಆಳ್ವ ಎಂಬ ಉದ್ಯಮಿ, ವಿಮಾನ ಪ್ರಾಧಿಕಾರಕ್ಕೆ ವಕೀಲರ ಮೂಲಕ ಆರ್ಟಿಐ ಮಾಹಿತಿ ಕೇಳಿದ್ದರು. ಗುತ್ತಿಗೆ ಒಪ್ಪಂದದ ಪ್ರಕಾರ ಮಂಗಳೂರು ವಿಮಾನ ನಿಲ್ದಾಣದ ಹೆಸರು ಬದಲಾವಣೆಗೆ ಅವಕಾಶ ಇಲ್ಲದಿದ್ದರೂ, ಅದಾನಿ ಹೆಸರನ್ನು ಹಾಕಲಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಬರೆದಿದ್ದ ವಿಮಾನ ಪ್ರಾಧಿಕಾರ, ಅದಾನಿ ಹೆಸರು ಬಳಕೆ ಮಾಡಿರುವುದು ಕಾನೂನುಬಾಹಿರ. ಇದನ್ನು ತೆರವು ಮಾಡಲು ಅದಾನಿ ಸಂಸ್ಥೆಗೆ ಸೂಚಿಸಲಾಗುವುದು ಎಂದು ತಿಳಿಸಿತ್ತು.
ಆದರೆ, ಅದಾನಿ ಸಂಸ್ಥೆ ತಮ್ಮ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಅದಾನಿ ಹೆಸರನ್ನು ಇತ್ತೀಚಿಗೆ ತೆಗೆದಿದೆ. ಈ ಹಿನ್ನೆಲೆಯಲ್ಲಿ ಯುವ ತುಳುನಾಡು ಸಂಸ್ಥೆ, ನಾಮಫಲಕದಲ್ಲಿ ಹಾಕಲಾಗಿರುವ ಅದಾನಿ ಹೆಸರು ತೆರವಿಗೆ ತೆಗೆದುಕೊಂಡ ಕ್ರಮ ಪ್ರಶ್ನಿಸಿ ವಕೀಲರ ಮೂಲಕ ಆರ್ಟಿಐ ಅರ್ಜಿ ಸಲ್ಲಿಸಲು ಮುಂದಾಗಿದೆ.
ಇದನ್ನೂ ಓದಿ: ಹೆಗಲ ಮೇಲೆ ಕೈ ಹಾಕಲು ಮುಂದಾದ ಕಾರ್ಯಕರ್ತ: ತಲೆಗೆ ಬಾರಿಸಿದ ಡಿಕೆಶಿ!