ಮಂಗಳೂರು: ರೈತರಿಗೆ ತೊಂದರೆಯಾಗುವ ಯಾವುದೇ ಯೋಜನೆ ಜಾರಿಯಾದರೂ ಅದನ್ನು ನಾವು ವಿರೋಧಿಸುತ್ತೇವೆ. ಆರ್‌ಸಿಇಪಿ ವಿಚಾರದ ಕುರಿತು ರೈತರಲ್ಲಿ ಆತಂಕ ಬೇಡ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸುಳ್ಯದಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಆರ್‌ಸಿಇಪಿ ವಿಷಯ ಎಲ್ಲಾ ಕಡೆಗಳಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ರೈತರು, ಕೃಷಿಕರು ಮತ್ತು ಯೂನಿಯನ್ ಮುಖಂಡರನ್ನು ಕರೆದು ಮಾತುಕತೆ ಮಾಡಿದ್ದಾರೆ. ಅದು ನೇರವಾಗಿ ರೈತರ ಮೇಲೆ ಹೇರಿಕೆ ಮಾಡುವುದಿಲ್ಲ ಎಂದು ಮಾನ್ಯ ಪ್ರಧಾನಿಯವರೇ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ರೈತರಲ್ಲಿ ಯಾವುದೇ ಆತಂಕ ಬೇಡ. ರೈತ ವಿರೋಧಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಲ್ಲ ಎಂದು ಅವರು ಹೇಳಿದರು.
ಕರ್ನಾಟಕದಲ್ಲೂ ಅಡಿಕೆ ಕೃಷಿ ಇದೆ. ಹೈನುಗಾರಿಕೆ ಮೂಲಕ ಬದುಕುವವರಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಕೂಡ ಈಗಾಗಲೇ ಕೇಂದ್ರಕ್ಕೆ ಪತ್ರವನ್ನು ಬರೆದಿದ್ದಾರೆ. ಹಾಗೇನಾದರು ಜಾರಿಯಾಗಿ ಅದರಿಂದ ರೈತರಿಗೆ ತೊಂದರೆ ಆಗುತ್ತದೆ ಅಂದರೆ ನಾವು ಎಲ್ಲರೂ ಸೇರಿ ಅದನ್ನು ವಿರೋಧಿಸುವ ಕೆಲಸ ಮಾಡುತ್ತೇವೆ ಎಂದರು.
ಮುಖ್ಯಮಂತ್ರಿಗಳ ಪರಿವ್ಯಾಪ್ತಿಯಲ್ಲಿ ನಿಗಮ ಮಂಡಳಿಗಳ ನೇಮಕ ವಿಚಾರದಲ್ಲಿ ಕೆಲವು ಸಮಸ್ಯೆಗಳು ಆಗಿದೆ ಎನ್ನಲಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿ ಸರಿಪಡಿಸಲಾಗುತ್ತದೆ. ಟಿಪ್ಪು ನೆತ್ತರಕರೆಯಲ್ಲಿ ಕ್ರೈಸ್ತರ ಮಾರಣ ಹೋಮ ನಡೆಸಿದ್ದು, ಮತಾಂತರ ಮಾಡಿದ್ದನ್ನು ನೋಡಿ ಕ್ರೈಸ್ತರೂ ಆತನನ್ನು ವಿರೋಧಿಸುತ್ತಾರೆ. ಇಸ್ಲಾಂ ಧರ್ಮದಲ್ಲಿ ಜಯಂತಿ ಆಚರಣೆಗಳೇ ಇಲ್ಲ. ಇಸ್ಲಾಂ- ಹಿಂದೂ ಧರ್ಮದಲ್ಲೂ ಟಿಪ್ಪುವಿನ ಬಗ್ಗೆ ವಿರೋಧವಿದೆ. ಆದ್ದರಿಂದ ಹಾಗೊಂದು ವೇಳೆ ಜಯಂತಿ ಮಾಡಬೇಕು, ಪಠ್ಯದಲ್ಲಿ ಸೇರಿಸಬೇಕೆಂದು ಇದ್ದರೆ ಅಬ್ದುಲ್ ಕಲಾಂ, ಸಂತ ಶಿಶುನಾಳ ಶರೀಫರಂತವರನ್ನೂ ಸೇರಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.