ಮಂಗಳೂರು: ಉಡುಪಿ ಜಿಲ್ಲೆ ಕೋಟತಟ್ಟು ಗ್ರಾಮದಲ್ಲಿ ಮೆಹಂದಿ ಕಾರ್ಯಕ್ರಮ ನಡೆಸುತ್ತಿದ್ದ ಕೊರಗರ ಮೇಲೆ ಪೊಲೀಸರು ದೌರ್ಜನ್ಯ ಪ್ರಕರಣದ ಬಗ್ಗೆ ಸಿಒಡಿ ತನಿಖೆಯ ಬದಲು ಹಾಲಿ ಜಿಲ್ಲಾ ನ್ಯಾಯಾಧೀಶರು ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಯು ಟಿ ಖಾದರ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಸರ್ಕಾರ ಸಿಒಡಿ ತನಿಖೆಗೆ ವಹಿಸಿದೆ. ಪೊಲೀಸರು ಮಾಡಿದ ದೌರ್ಜನ್ಯವನ್ನು ಪೊಲೀಸ್ ಅಧಿಕಾರಿಗಳೇ ಇರುವ ಸಿಒಡಿ ಯಿಂದ ಮಾಡಿಸುವುದು ಕಣ್ಣೊರೆಸುವ ತಂತ್ರ. ಇದರಿಂದಾಗಿ ನ್ಯಾಯ ಸಿಗಲು ಸಾಧ್ಯವಿಲ್ಲ. ನಾವು ಸಿಒಡಿ ತನಿಖೆಗೆ ಒಪ್ಪುವುದಿಲ್ಲ. ಈ ಬಗ್ಗೆ ಜಿಲ್ಲಾ ನ್ಯಾಯಾಧೀಶರು ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ದಬ್ಬಾಳಿಕೆ ನಡೆಸಿದ ಇತರ ಪೊಲೀಸರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೊರಗರ ಮೇಲೆ ಹಾಕಲಾದ ಸುಳ್ಳು ಮೊಕದ್ದಮೆ ವಾಪಸ್ ಪಡೆಯಬೇಕು. ಅನ್ಯಾಯಕ್ಕೊಳಗಾದವರಿಗೆ ಶೀಘ್ರ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ಪರಿವರ್ತನವಾದ ಮೈಸೂರು ವಿಭಾಗೀಯ ಸಂಚಾಲಕ ಅಶೋಕ್ ಕೊಂಚಾಡಿ ಅವರು ಈ ದೌರ್ಜನ್ಯದ ವಿರುದ್ಧ ಕಚ್ಚೂರು ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿ ಅಥವಾ ಎಸ್‌ಪಿ ಕಚೇರಿವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ಸೀಟ್ ಕಡಿಮೆ ಬಂದರೂ ಗ್ರಾಮ ಮಟ್ಟದಲ್ಲಿ ಮತದಾರರ ಸಂಖ್ಯೆ ಹೆಚ್ಚಳ: ಖಾದರ್