ಮಂಗಳೂರು: ಅಹಮದಾಬಾದ್ನಲ್ಲಿ ಇತ್ತೀಚಿಗೆ ಸಂಭವಿಸಿದ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿದುರಂತದ ಕಹಿಘಟನೆ ಹಿನ್ನೆಲೆಯಲ್ಲಿ ಮಂಗಳೂರಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಗ್ನಿ ಅನಾಹುತ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಆಸ್ಪತ್ರೆಗಳಲ್ಲಿ ಸಂಭವಿಸುವ ಅಗ್ನಿ ದುರಂತಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಅದಕ್ಕೆ ಕಾರಣ. ಎಷ್ಟೋ ಆಸ್ಪತ್ರೆಗಳು ಎನ್ಒಸಿ ಮತ್ತು ಸುರಕ್ಷತಾ ಪ್ರಮಾಣ ಪತ್ರ ಪಡೆಯದೇ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ, ಈ ರೀತಿ ಅವಘಡಗಳು ಜರುಗುತ್ತಿವೆ. ಇತ್ತ ಆಸ್ಪತ್ರೆಗಳ ಮಾಲೀಕರ ನಿರ್ಲಕ್ಷ್ಯವೂ ಇದರಲ್ಲಿ ಅಡಗಿದೆ.
ಎಲ್ಲ ಖಾಸಗಿ ಆಸ್ಪತ್ರೆಗಳು ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆಯಡಿ ನೋಂದಣಿಯಾಗುತ್ತವೆ. ಅದಕ್ಕೂ ಮುಂಚೆಯೇ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಅಗ್ನಿ ಸುರಕ್ಷತೆ ಪರವಾನಗಿ ಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ರಾಜ್ಯ ಸರ್ಕಾರ ನೀಡುವ ನಿರ್ದೇಶನದಂತೆ ಅಗ್ನಿ ಸುರಕ್ಷತೆ ಇರಲಿದೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಮಾಹಿತಿ ನೀಡಿದರು.
ಜಿಲ್ಲೆಯ ಕೊರೊನಾ ಆಸ್ಪತ್ರೆಗಳಲ್ಲಿ ದುರಂತ ಸಂಭವಿಸದಂತೆ ಅಗ್ನಿ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಳೆಯ ಆಸ್ಪತ್ರೆಗಳ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆ ಕಡ್ಡಾಯವಿರಲಿಲ್ಲ. 2011ರ ಬಳಿಕ ನಿರ್ಮಾಣವಾದ ಆಸ್ಪತ್ರೆಗಳು ಎನ್ಒಸಿ ಪಡೆಯಬೇಕಿದೆ. ಅದಕ್ಕೆ ಮೊದಲು ನಿರ್ಮಿಸಿದ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಅಗ್ನಿ ಸುರಕ್ಷತೆ ಅಳವಡಿಸುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ಮುಖ್ಯ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ.