ಮಂಗಳೂರು: ಕುಟುಂಬದಲ್ಲಿ ಒಬ್ಬ ಮಾದಕ ವ್ಯಸನಿಯಾದರೆ ಆ ಇಡೀ ಕುಟುಂಬವೇ ಅವಸಾನದತ್ತ ಸಾಗುತ್ತದೆ. ಅಲ್ಲದೆ ಆ ಕುಟುಂಬದ ಆರ್ಥಿಕ, ಸಾಮಾಜಿಕ ಜೀವನಕ್ಕೂ ತೊಂದರೆಯಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು.
ದಕ್ಷಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ವತಿಯಿಂದ ನಗರದ ರೊಜಾರಿಯೊ ಪ.ಪೂ.ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ಹಾಗೂ ಅಕ್ರಮ ಕಳ್ಳಸಾಗಣೆ ತಡೆಗಟ್ಟುವ ದಿನ 2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾರೂ ಹುಟ್ಟುವಾಗಲೇ ಕೆಟ್ಟ ಚಾರಿತ್ರ್ಯ ಹೊಂದುವೆ ಎಂದು ಈ ಪ್ರಪಂಚದಲ್ಲಿ ಹುಟ್ಟುವುದಿಲ್ಲ. ಈ ಸಮಾಜದಲ್ಲಿರುವ ವ್ಯವಸ್ಥೆಯಿಂದಾಗಿ ಮಾನವ ಕೆಟ್ಟಗುಣಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾನೆ. ಆದ್ದರಿಂದ ಮಾದಕವ್ಯಸನಿಗಳ ಮನಪರಿವರ್ತನೆ ಮಾಡಲು ಎಲ್ಲಾ ನಾಗರಿಕರು ಕೈಜೋಡಿಸಬೇಕಾಗಿದೆ. ಆತ ಆ ವ್ಯಸನದಿಂದ ಹೊರಬರಲು ಸಹಕರಿಸಬೇಕಾಗಿದೆ ಎಂದರು.
ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಎಂಆರ್ ಪಿಎಲ್ ಯುನಿಟ್ ನ ಉಪ ಕಮಾಂಡೆಂಟ್ ಮೃತ್ಯುಂಜಯ ಸ್ವಾಮಿ ಡಿ, ಮಾನಸಿಕ ರೋಗ ತಜ್ಞ ಡಾ ಅನಿರುದ್ಧ್ ಶೆಟ್ಟಿ, ರೊಜಾರಿಯೊ ವಿದ್ಯಾಸಂಸ್ಥೆಗಳ ಸಂಚಾಲಕ ರೆ.ಫಾ.ಜೆ.ಬಿ.ಕ್ರಾಸ್ತಾ, ರೊಜಾರಿಯೊ ಪ.ಪೂ.ಕಾಲೇಜಿನ ಪ್ರಾಂಶುಪಾಲ ರೆ.ಫಾ.ವಿಕ್ಟರ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.