ಮಂಗಳೂರು: ಕರಾವಳಿಯ ಅಭಿವೃದ್ಧಿಗಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಆಯವ್ಯಯ ಸಭೆಯಲ್ಲಿ ಸಿಎಂ ಗಮನಕ್ಕೆ ತಂದಿದ್ದೇನೆ. ಆದ್ದರಿಂದ ತ್ವರಿತ ಗತಿಯಲ್ಲಿ ಮೂಲಸೌಕರ್ಯ ವ್ಯವಸ್ಥೆ ಮಾಡಲು, ಉತ್ತರ ಕನ್ನಡ ಜಿಲ್ಲೆಯ ಬೆಳಗೇರಿ, ಕಾರವಾರ ಹಾಗೂ ತಡದಿಗೆ ಸಂಪರ್ಕ ಕೊಂಡಿಯನ್ನು ನಿರ್ಮಾಣ ಮಾಡಬೇಕೆಂದು ಸಭೆಯಲ್ಲಿ ಚರ್ಚೆಯಾಗಿದೆ ಎಂದು ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ. ಜೆ.ಪುಟ್ಟಸ್ವಾಮಿ ಹೇಳಿದರು.
ನಗರದ ಖಾಸಗಿ ಹೊಟೇಲ್ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಯೋಜನೆಗೆ ಸಾಕಷ್ಟು ಹಣವನ್ನು ಮೀಸಲಿರಿಸಲಾಗಿದೆ. ಮೊದಲನೆಯದಾಗಿ ಅಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಅಲ್ಲದೆ ಕೊಂಕಣ ರೈಲ್ವೆಯಿಂದ ಬಂದರು ಪ್ರದೇಶಕ್ಕೆ ಸಂಪರ್ಕ ಮಾರ್ಗ ನಿರ್ಮಾಣ ಮಾಡುವುದು. ಅದೇ ರೀತಿ ವಾಯು ಸಂಪರ್ಕವನ್ನು ಆದಷ್ಟು ಬೇಗ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಕರಾವಳಿ ಜಿಲ್ಲೆಗಳ ಅಭಿವೃದ್ಧಿ:
ತನಿಖಾ ಪ್ರಾಧಿಕಾರವು ಕರಾವಳಿ ಅಭಿವೃದ್ಧಿ ಪ್ರಾಧಿಕಾರದಡಿಯಲ್ಲಿ ಬರುವ ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಅಭಿವೃದ್ಧಿ ಮಾಡುವಂತಹ ಮಾರ್ಗಸೂಚಿಗಳನ್ನು ನೀಡಿದ ಹಿನ್ನೆಲೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಈ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಮಾಡುವುದು ಎಂದರು.
ರೈತರಿಗೆ ಕೌಶಲ್ಯ ತರಬೇತಿ:
ರೈತರಿಗೂ ಕೌಶಲ್ಯಗಳ ಬಗ್ಗೆ ತರಬೇತಿ ನೀಡಬೇಕೆಂಬ ಉದ್ದೇಶದಿಂದ ಪ್ರತಿಯೊಂದು ಹಳ್ಳಿಗಳಲ್ಲಿ, ಪಂಚಾಯತ್ ಮಟ್ಟದಲ್ಲಿ ಕೌಶಲ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಿಂದ ಯುವಕರು ಪಟ್ಟಣದ ಕಡೆಗೆ ಬರೋದು ವಿರಳವಾಗುತ್ತದೆ. ಈ ಮೂಲಕ ಮಹಿಳೆಯರ ಕೌಶಲ್ಯ ಅಭಿವೃದ್ಧಿಗೆ ತರಬೇತಿ ನೀಡಲಾಗುತ್ತದೆ. ಅಲ್ಲದೆ ಖುತುಮಾನಕ್ಕೆ ತಕ್ಕ ಬೆಳೆ ಬೆಳೆಯಲು ತರಬೇತಿ ನೀಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.