ಮಂಗಳೂರು: ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕದ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಆರ್ಟಿಪಿಸಿಆರ್ ರಿಪೋರ್ಟ್ ಇಲ್ಲದೆ ಇದ್ದಲ್ಲಿ ಪ್ರವೇಶ ನಿರಾಕರಣೆ ಮಾಡಲಾಗುತ್ತಿದೆ. ಇದೇ ವಿಚಾರಕ್ಕೆ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಕೇರಳದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಕೂಡ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿದ್ದು, ನಿನ್ನೆ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಕೇರಳದಿಂದ ಬರುವವರು ಕಡ್ಡಾಯವಾಗಿ 7 ದಿನಗಳೊಳಗಿನ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ತೋರಿಸಬೇಕೆಂದು ಸರ್ಕಾರ ಆದೇಶಿಸಿದೆ. ಅದರಂತೆ ಗಡಿಯಲ್ಲಿ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಲಾಗುತ್ತಿದೆ. ಕೊರೊನಾ ಲಸಿಕೆ ಪಡೆದವರಿಗೂ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡಲಾಗುತ್ತಿಲ್ಲ.
ದಿಢೀರ್ ನಿರ್ಧಾರದಿಂದ ಗೊಂದಲ..
ತಲಪಾಡಿ ಗಡಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದಲ್ಲಿ ಇಂದು ಬೆಳಗ್ಗೆವರೆಗೆ ಆರ್ಟಿಪಿಸಿಆರ್ ರಿಪೋರ್ಟ್ ಇಲ್ಲದವರಿಗೆ ಸ್ಥಳದಲ್ಲೇ ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಕೊರೊನಾ ಲಸಿಕೆ ಪಡೆದವರೂ ಸೇರಿದಂತೆ ಜಿಲ್ಲೆಗೆ ಪ್ರವೇಶಿಸುವವರು ಆರ್ಟಿಪಿಸಿಆರ್ ಪರೀಕ್ಷೆ ನಡೆಸಲು ಸರತಿ ಸಾಲಿನಲ್ಲಿ ನಿಂತಿದ್ದರು. ಸ್ಥಳದಲ್ಲಿ ಪರೀಕ್ಷೆ ನಡೆಸಿ, ಅವರಿಗೆ ಜಿಲ್ಲೆ ಪ್ರವೇಶಕ್ಕೆ ಅನುಮತಿ ನೀಡಿದರೆ ಪಾಸಿಟಿವ್ ಇದ್ದವರು ಕೊರೊನಾ ಹಬ್ಬಿಸುವ ಸಾಧ್ಯತೆ ಇರುವುದರಿಂದ ಇಂದಿನಿಂದ ದಿಢೀರ್ ಆರ್ಟಿಪಿಸಿಆರ್ ಪರೀಕ್ಷೆ ನಡೆಸುವುದನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿ, ಸರತಿ ಸಾಲಿನಲ್ಲಿ ಕಾದು ನಿಂತು ವಾಪಸ್ ತೆರಳಬೇಕಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗೆ ತೆರಳುವವರಿಗೆ ಹಾಲ್ ಟಿಕೆಟ್ ತೋರಿಸಿ ಪರೀಕ್ಷೆಗೆ ತೆರಳಲು ಅನುಮತಿ ನೀಡಲಾಯಿತು.
ಜಿಲ್ಲಾಧಿಕಾರಿ, ಪೊಲೀಸ್ ಕಮೀಷನರ್ರಿಂದ ಪರಿಶೀಲನೆ..
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಲಪಾಡಿ ಚೆಕ್ ಪೋಸ್ಟ್ಗೆ ಭೇಟಿ ನೀಡಿ, ಭದ್ರತೆಯ ಕುರಿತು ಪರಿಶೀಲಿಸಿದರು. ಜೊತೆಗೆ ಕೇರಳದಿಂದ ಬರುವವರ ಆರ್ಟಿಪಿಸಿಆರ್ ನೆಗೆಟಿವ್ ವರದಿಯನ್ನು ಖುದ್ದು ಪರಿಶೀಲನೆ ನಡೆಸಿದರು.
ಕೇರಳಿಗರ ಆಕ್ರೋಶ
ಜಿಲ್ಲಾಡಳಿತ ಜಿಲ್ಲೆಯ ಪ್ರವೇಶಕ್ಕೆ ಅನುಮತಿ ನಿರಾಕರಿಸಿರುವುದನ್ನು ಆಕ್ಷೇಪಿಸಿ, ಕೇರಳದ ಕೆಲ ಯುವಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಪೊಲೀಸರು ಫೋಟೋ ತೆಗೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಯುವಕರು ಘೋಷಣೆ ಕೂಗಿದರು. ಇದೇ ವೇಳೆ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಯಿತು.
ಇದನ್ನೂ ಓದಿ: ದ.ಕ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಕೋವಿಡ್ ಕೇಸ್ ದಾಖಲು