ಮಂಗಳೂರು: ಸರ್ಕಾರಿ ಜಾಗ ಅತಿಕ್ರಮಿಸಿದ ಆರೋಪದಡಿ ನಗರದ ಕೆಂಜಾರಿನ ಕಪಿಲಾ ಗೋ ಶಾಲೆಯನ್ನು ಅಧಿಕಾರಿಗಳ ಸಮಕ್ಷಮದಲ್ಲಿ ನೆಲಸಮ ಮಾಡಲಾಗಿದ್ದು, ಪರಿಣಾಮ 300 ಕ್ಕೂ ಅಧಿಕ ದೇಸಿ ತಳಿಯ ಗೋವುಗಳು ಬೀದಿಪಾಲಾಗಿವೆ.
ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿಯನ್ನು ಸ್ಥಾಪಿಸಲು ಕೆಂಜಾರಿನ 158 ಎಕರೆ ಪ್ರದೇಶದಲ್ಲಿ ಭೂಮಿಯನ್ನು ಕೆಐಎಡಿಬಿಯಿಂದ ಪಡೆದುಕೊಳ್ಳಲಾಗಿತ್ತು. ಇದೇ ಪ್ರದೇಶದಲ್ಲಿ ಕಪಿಲಾ ಗೋಶಾಲೆಯಿದ್ದು, ಸರ್ಕಾರಿ ಭೂಮಿಯಲ್ಲಿ ಅತಿಕ್ರಮವಾಗಿ ಗೋಶಾಲೆಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿದೆ. ಅಲ್ಲದೇ ಕಳೆದ ಫೆ.22 ರಂದು ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಈ ಗೋಶಾಲೆ ಅಕ್ರಮವಾಗಿದ್ದರೆ ಇದರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದ್ದರು.
ಈ ಹಿನ್ನೆಲೆ ಗೋವುಗಳು ಮೇಯಲು ಹೋಗಿದ್ದ ವೇಳೆ ಜೆಸಿಬಿಯಿಂದ ಗೋಶಾಲೆಯನ್ನು ನೆಲಸಮ ಮಾಡಲಾಗಿದೆ. ಜಾಗದ ಹಳೆಯ ಮಾಲೀಕರಿಗೆ 1993ರಲ್ಲೇ ಪರಿಹಾರ ಕೊಟ್ಟು ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿತ್ತು. ಸದ್ಯ ಹಳೆಯ ಮಾಲೀಕರು ಮೃತರಾಗಿದ್ದು, ಇದೀಗ ಕಪಿಲಾ ಗೋಶಾಲೆಯ ರೂವಾರಿ ಪ್ರಕಾಶ್ ಶೆಟ್ಟಿಯವರು 1993ರಲ್ಲಿ ಜಾಗ ಖರೀದಿಸಿ ಗೋ ಶಾಲೆ ನಿರ್ಮಿಸಿದ್ದರು.
ಗೋ ಶಾಲೆ ನಿರ್ಮಾಣಕ್ಕಾಗಿ ಪ್ರಕಾಶ್ ಶೆಟ್ಟಿಯವರು ಜಾಗ ಅತಿಕ್ರಮಣ ಮಾಡಿರುವ ಆರೋಪದಡಿ ನೆಲಸಮ ಮಾಡಲಾಗಿದ್ದು, ಇದೀಗ ಗೋ ಶಾಲೆ ಇಲ್ಲದೇ ನೂರಾರು ಗೋವುಗಳು ಬೀದಿಗೆ ಬಿದ್ದಿವೆ. ಗೋ ಶಾಲೆ ಜೊತೆಗೆ ಪ್ರಕಾಶ್ ಶೆಟ್ಟಿಯ ಇಂಟರ್ ಲಾಕ್ ಫ್ಯಾಕ್ಟರಿ ಕೂಡ ನೆಲಸಮ ಮಾಡಲಾಗಿದೆ.
ಒಟ್ಟಿನಲ್ಲಿ ನೂರಾರು ಗೋವುಗಳನ್ನು ಬೀದಿಪಾಲಾಗಿದ್ದು, ಕಪಿಲಾ ಗೋಶಾಲೆಯ ರೂವಾರಿ ಪ್ರಕಾಶ್ ಶೆಟ್ಟಿಯವರು ಗೋವುಗಳಿಗೆ ಮೇವು, ಹಿಂಡಿ, ನೀರು, ಕಲಗಚ್ಚು ಒದಗಿಸಲು ಸಾಧ್ಯವಾಗದೇ ಅಸಹಾಯಕರಾಗಿದ್ದಾರೆ.