ಮಂಗಳೂರು: ಡೀಮ್ಡ್ ಫಾರೆಸ್ಟ್‌ನಲ್ಲಿದ್ದ 6.50 ಲಕ್ಷ ಎಕರೆ ಭೂಮಿಯನ್ನು ಹೊರ ತರಲು ರಾಜ್ಯ ಸರಕಾರ ಮಹತ್ವದ ತೀರ್ಮಾನ ಮಾಡಿದೆ. ಡೀಮ್ಡ್ ಫಾರೆಸ್ಟ್‌ನಲ್ಲಿದ್ದ ಜನರು ನಿರಂತರ ಕಿರುಕುಳ ಅನುಭವಿಸುತ್ತಿದ್ದರು. ಈ ಸಮಸ್ಯೆ ಸಾಕಷ್ಟು ವರ್ಷಗಳಿಂದ ಬಗೆಹರಿದಿರಲಿಲ್ಲ. ಡೀಮ್ಡ್ ಫಾರೆಸ್ಟ್ನಿಂದ ಹೊರಗಿಡಲು ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿ ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಸಹಿ ಹಾಕಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
10 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮೂಡುಬಿದಿರೆ ತಾಲೂಕು ಆಡಳಿತ ಸೌಧ ಉದ್ಘಾಟನೆ ಮತ್ತು ಮುಲ್ಕಿ - ಮೂಡುಬಿದಿರೆ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಮಾಡಿ ಮಾತನಾಡಿದ ಅವರು, ಡೀಮ್ಡ್ ಅರಣ್ಯ ಸಮಸ್ಯೆಯಂತೆಯೇ ಕುಮ್ಕಿ ಕಾನ, ಬಾಣೆ, ಸೊಪ್ಪಿನ ಬೆಟ್ಟ ಸಮಸ್ಯೆಗಳನ್ನೂ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಮೂಡುಬಿದಿರೆ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಮಂಜೂರಾತಿ ಕೊಡುವ ಭರವಸೆಯನ್ನು ಸಿಎಂ ನೀಡಿದರು.
ಹಾಲು ಉತ್ಪಾದಕರಿಗೆ ಬ್ಯಾಂಕ್: ಹಾಲು ಉತ್ಪಾದಕರಿಗೆ ಕೃಷಿ ಅಭಿವೃದ್ಧಿ ಬ್ಯಾಂಕ್ ಅನ್ನು ಇಡೀ ದೇಶದಲ್ಲಿಯೇ ರಾಜ್ಯದಲ್ಲಿ ಪ್ರಥಮವಾಗಿ ಮಾಡಲಾಗಿದೆ. ರೈತರ ಮಕ್ಕಳ ವಿದ್ಯಾರ್ಜನೆಗೆ ವಿದ್ಯಾ ನಿಧಿಯನ್ನು ಇಡೀ ದೇಶದಲ್ಲಿ ಪ್ರಥಮ ಬಾರಿಗೆ ರಾಜ್ಯದಲ್ಲಿ ನೀಡಲಾಗಿದೆ. ಸಿಎಂ ಆದ 24 ಗಂಟೆಯಲ್ಲಿ 1000 ಕೋಟಿ ರೂ. ಈ ವಿದ್ಯಾನಿಧಿ ಪ್ರಾರಂಭಿಸಿದ್ದೇನೆ. ಕೋವಿಡ್ನ ಕಾಲದಲ್ಲೂ ಈ ಯೋಜನೆಯಿಂದ ರಾಜ್ಯದ 7 ಲಕ್ಷ ಮಕ್ಕಳಿಗೆ ಅನುಕೂಲವಾಗಿದೆ. ಮುಂದಿನ ವರ್ಷ ಇದು 15 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ಇದನ್ನೂ ಓದಿ: ರಾಘವೇಂದ್ರ ಡಿ.ಚನ್ನಣ್ಣನವರ್ ವಿರುದ್ಧ ಗಂಭೀರ ಆರೋಪ: ಕೋರ್ಟ್ ಮೆಟ್ಟಿಲೇರಲು ಸಜ್ಜಾದ ಮಹಿಳೆ