ಮಂಗಳೂರು: ಆಸ್ಪತ್ರೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಆ್ಯಂಬುಲೆನ್ಸ್ನಲ್ಲಿ ಕೊಂಡೊಯ್ಯುತ್ತಿದ್ದಾಗ ಆತ ಕಣ್ಣು ಬಿಟ್ಟು ಉಸಿರಾಡಿದ ಘಟನೆ ನಡೆದಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ವಾಂತಿಚ್ಚಾಲ್ ನಿವಾಸಿ ಗುರುವ (60) ಎಂಬವರನ್ನು ವಯೋಸಹಜ ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ರೋಗಿಯು ಆಕ್ಸಿಜನ್ ಸಹಾಯದಿಂದ ಉಸಿರಾಟ ನಡೆಯುತ್ತಿರುವುದರಿಂದ ಆಕ್ಸಿಜನ್ ತೆಗೆದರೆ ಅವರು ಸಾವನ್ನಪ್ಪುತ್ತಾರೆ ಎಂದು ಸಂಬಂಧಿಕರಿಗೆ ತಿಳಿಸಲಾಗಿತ್ತು.
ಅವರು ಬದುಕುವ ಸಾಧ್ಯತೆ ಇಲ್ಲದಿರುವುದರಿಂದ ಆಕ್ಸಿಜನ್ ತೆರವು ಮಾಡಲು ಸಂಬಂಧಿಕರು ತಿಳಿಸಿದಂತೆ ಆಕ್ಸಿಜನ್ ತೆರವು ಮಾಡಲಾಗಿತ್ತು. ಆಕ್ಸಿಜನ್ ತೆಗೆದ ಬಳಿಕ ಮೃತಪಟ್ಟಿದ್ದಾರೆ ಎಂದು ಅವರನ್ನು ಆ್ಯಂಬುಲೆನ್ಸ್ನಲ್ಲಿ ಮನೆಗೆ ಕೊಂಡೊಯ್ಯಲಾಗಿತ್ತು. ಅಂತ್ಯಸಂಸ್ಕಾರಕ್ಕೆ ಚಿತೆ ಸಿದ್ಧ ಮಾಡಲು ಕೂಡ ಸೂಚಿಸಲಾಗಿತ್ತು.
ಆದರೆ, ಆ್ಯಂಬುಲೆನ್ಸ್ನಲ್ಲಿ ಹೋಗುತ್ತಿರುವಾಗ ಕಾಸರಗೋಡು ಜಿಲ್ಲೆಯ ಉಪ್ಪಳ ಎಂಬಲ್ಲಿ ಗುರುವ ಅವರ ದೇಹದಲ್ಲಿ ಚಲನೆ ಕಂಡು ಬಂದಿದೆ. ಕಣ್ಣುಬಿಟ್ಟ ಅವರು ಉಸಿರಾಟ ಆರಂಭಿಸಿದ್ದರು. ಕೂಡಲೇ ಅವರನ್ನು ಬದಿಯಡ್ಕದ ಕ್ಲಿನಿಕ್ಗೆ ಕರೆದೊಯ್ದಾಗ ಆತ ಜೀವಂತವಾಗಿರುವ ಬಗ್ಗೆ ವೈದ್ಯರು ತಿಳಿಸಿದ್ದರು. ಬಳಿಕ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
(ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ)