ಬೆಳ್ತಂಗಡಿ : ಕಾಂಗ್ರೆಸ್ ಕಾರ್ಯಕರ್ತ ಹಾಗೂ ದಲಿತ ಸಮುದಾಯದ ವ್ಯಕ್ತಿಯನ್ನು ಬೆಳ್ತಂಗಡಿಯಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಿಟ್ಟ ಯಾನೆ ಕೃಷ್ಣ ಪೊಲೀಸ್ ವಶದಲ್ಲಿರುವ ಆರೋಪಿ. ಕನ್ಯಾಡಿ ದಿನೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನ ವಶಕ್ಕೆ ಪಡೆದಿರುವ ಪೊಲೀಸರು, ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ದಲಿತ ಯುವಕನ ಹತ್ಯೆ ಪ್ರಕರಣ: ಆರೋಪಿ ಬಂಧಿಸುವಂತೆ ಸಿದ್ದು ಒತ್ತಾಯ
ಏನಿದು ಪ್ರಕರಣ?: ಫೆ. 23ರ ಬೆಳಗ್ಗೆ 11 ಗಂಟೆ ಸುಮಾರಿಗೆ ಆರೋಪಿ ಕಿಟ್ಟ ಯಾನೆ ಕೃಷ್ಣನ ಜಮೀನಿನ ದಾಖಲೆಗಳನ್ನು ತಾನು ಮಾಡಿಕೊಟ್ಟಿರುವುದಾಗಿ ಮೃತ ದಿನೇಶ್ ಸಾರ್ವಜನಿಕವಾಗಿ ಹೇಳಿದ್ದನು.
ಇದರಿಂದ ಕೋಪಗೊಂಡ ಕೃಷ್ಣ, ದಿನೇಶ್ ಹೊಟ್ಟೆಗೆ ಕೈಯಿಂದ ಗುದ್ದಿ, ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದನು. ಹೀಗೆ ಹಲ್ಲೆಗೊಳಗಾದ ದಿನೇಶ್ ಹಣವಿಲ್ಲದೆ ಚಿಕಿತ್ಸೆಗೆ ಹೋಗದೆ ಮನೆಯಲ್ಲೇ ನರಳಾಡಿದ್ದ.
ಫೆ.24ರಂದು ಹಲ್ಲೆಗೊಳಗಾದ ದಿನೇಶ್ ಮನೆಯವರು, ಕೃಷ್ಣನ ಬಳಿ ಹೋಗಿ ಆತನಿಗೆ ಹೊಡೆದಿರುವ ನೀನೇ ಆಸ್ಪತ್ರೆಗೆ ದಾಖಲಿಸುವಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಸಮ್ಮತಿಸಿದ ಆರೋಪಿ, ಆತನನ್ನು ಮೆಟ್ಟಿಲಿನಿಂದ ಬಿದ್ದಿದ್ದಾನೆ ಎಂದು ಸುಳ್ಳು ಹೇಳಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾನೆ.
ಆದ್ರೆ, ಚಿಕಿತ್ಸೆ ಫಲಿಸದೇ ಒಳರೋಗಿ ವಿಭಾಗದಲ್ಲಿ ದಿನೇಶ್ ಶುಕ್ರವಾರ ಮೃತಪಟ್ಟಿದ್ದಾನೆ. ಈತನ ಮೇಲಿನ ಹಲ್ಲೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಆಕ್ರೋಶ ವ್ಯಕ್ತಪಡಿಸಿದ್ದರು.