ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗುದನಾಳದಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದ ಅಪಾರ ಪ್ರಮಾಣದ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 67,24,680 ಮೌಲ್ಯದ ಒಟ್ಟು 24 ಕ್ಯಾರೆಟ್ನ ಒಟ್ಟು 1303 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.
ಮೊದಲ ಪ್ರಕರಣ ಮೇ 14 ರಂದು ನಡೆದಿದ್ದು, ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಕೇರಳ ರಾಜ್ಯದ ಕಾಸರಗೋಡು ಮೂಲದ ಪ್ರಯಾಣಿಕ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ. ಈತ ಗುದನಾಳದಲ್ಲಿ ಪೇಸ್ಟ್ ರೂಪದ ಚಿನ್ನವನ್ನು ಬಚ್ಚಿಟ್ಟಿದ್ದ. ಈತನಿಂದ 27,89,700 ಮೌಲ್ಯದ 547 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಎರಡನೇ ಪ್ರಕರಣ ಮೇ 18 ರಂದು ಪತ್ತೆಯಾಗಿದೆ. ಕಾಸರಗೋಡು ಜಿಲ್ಲೆಯ ಚೆಂಗಳದ ಈ ಪ್ರಯಾಣಿಕ ಕೂಡ ದುಬೈನಿಂದ ಮಂಗಳೂರಿಗೆ ಬಂದಿದ್ದ. ಈತ ತನ್ನ ಗುದನಾಳದಲ್ಲಿ ಪೇಸ್ಟ್ ರೂಪದ ಚಿನ್ನವನ್ನು ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ. ಈತನಿಂದ 39,34,980 ಮೌಲ್ಯದ 756 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕರಿಬ್ಬರನ್ನು ಮತ್ತು ಚಿನ್ನವನ್ನು ವಶಪಡಿಸಿಕೊಂಡ ಕಸ್ಟಮ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
(ಇದನ್ನೂ ಓದಿ: ಒಳ ಉಡುಪಿನಲ್ಲಿ 50 ಲಕ್ಷ ಮೌಲ್ಯದ ಚಿನ್ನ ಸಾಗಣೆ.. ದುಬೈನಿಂದ ಬಂದು ಬೆಂಗಳೂರಲ್ಲಿ ಸಿಕ್ಕಿಬಿದ್ದ)