ಮಂಗಳೂರು: ಕೋವಿಡ್ ಎರಡನೇ ಅಲೆ ದೇಶಾದ್ಯಂತ ಭಾರಿ ಅವಾಂತರ ಸೃಷ್ಟಿಸಿದ್ದು, ದ.ಕ.ಜಿಲ್ಲೆಯ ಸಣ್ಣ ವ್ಯಾಪಾರಿಗಳಿಗೆ ಭವಿಷ್ಯದ ಚಿಂತೆ ಮೂಡಿದೆ.
ಕೊರೊನಾ ಮೊದಲನೇ ಅಲೆ ಆರಂಭವಾದ ಸಂದರ್ಭದಲ್ಲಿ ದೇಶಾದ್ಯಂತ ಲಾಕ್ಡೌನ್ ಹೇರಲಾಯಿತು. ಇದರ ಪರಿಣಾಮ ದೇಶದ ವ್ಯಾಪಾರ ವಹಿವಾಟು ಕುಸಿದು ಇಡೀ ಆರ್ಥಿಕ ಪರಿಸ್ಥಿತಿ ಮೇಲೆ ಭಾರಿ ಹೊಡೆತ ಬಿದ್ದಿದೆ. ಬಡ, ಮಧ್ಯಮ ವರ್ಗದ ಜನತೆಯಂತೂ ಭಾರಿ ಸಂಕಷ್ಟ ಎದುರಿಸಿದ್ದರು. ಕೊರೊನಾ ಪ್ರಕರಣ ಇಳಿಮುಖವಾಗುತ್ತಿದ್ದಂತೆ ಮತ್ತೆ ವ್ಯಾಪಾರ ವಹಿವಾಟು ಆರಂಭವಾದರೂ ಮೊದಲಿನಂತೆ ಉತ್ತಮ ವ್ಯಾಪಾರವಿಲ್ಲದೆ ಸಣ್ಣ ವ್ಯಾಪಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ನಡುವೆ ಇದೀಗ ಎರಡನೆ ಅಲೆ ಮತ್ತೊಮ್ಮೆ ಸಣ್ಣ-ಪುಟ್ಟ ವ್ಯಾಪಾರ ನಂಬಿಕೊಂಡ ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸಿದೆ.
ಮಹಾಮಾರಿ ಕೊರೊನಾ ಮದುವೆ ಸೇರಿದಂತೆ ಕಾರ್ಯಕ್ರಮಗಳ ಸೀಸನ್ ಟೈಮ್ನಲ್ಲಿ ವಕ್ಕರಿಸಿದೆ. ಇದೀಗ ಸರ್ಕಾರ ಕೊರೊನಾ ಕರ್ಫ್ಯೂ ಘೋಷಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಸೂಚಿಸಿದೆ. ಇದರಿಂದಾಗಿ ಮತ್ತೊಮ್ಮೆ ವ್ಯಾಪಾರಿಗಳು ದಿಕ್ಕೇ ತೋಚದಂತಾಗಿದ್ದಾರೆ. ವ್ಯಾಪಾರ ಕೇಂದ್ರಗಳು ಮತ್ತೆ ಮುಚ್ಚಲ್ಪಟ್ಟಿವೆ.
ಇದನ್ನೂ ಓದಿ: 3ನೇ ಹಂತದ ವ್ಯಾಕ್ಸಿನೇಷನ್ಗೆ ಸಿದ್ಧತೆ ಮಾಡಿಕೊಳ್ಳಿ: ಬಿಬಿಎಂಪಿ ಆಯುಕ್ತರ ಸೂಚನೆ
ಕಳೆದ ಸಂದರ್ಭದಲ್ಲಿ ಕೆಲವು ಕಟ್ಟಡ ಮಾಲೀಕರು ಒಂದೆರಡು ತಿಂಗಳ ಬಾಡಿಗೆ ಮನ್ನಾ ಮಾಡಿದರಾದರೂ ವ್ಯಾಪಾರಿಗಳು ಚೇತರಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಕೆಲವು ಕಟ್ಟಡ ಮಾಲೀಕರಿಗೆ ಸರಿಯಾಗಿ ಬಾಡಿಗೆಯೂ ಸಿಗದ ಪರಿಸ್ಥಿತಿ ಉದ್ಭವವಾಗಿದೆ.