ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿದ್ದು, ಇಂದು ವಿದೇಶದಿಂದ ಬಂದ 456 ಮಂದಿಯನ್ನು ತಪಾಸಣೆ ನಡೆಸಿ 14 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಹಿಂದೆ ಕಳುಹಿಸಲಾದ 10 ಮಂದಿಯ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದ್ದು, ಕೊರೊನಾ ಸೋಂಕು ಇಲ್ಲ ಎಂದು ದೃಢಪಟ್ಟಿದೆ. 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದೇಶದಿಂದ ಬಂದಿರುವ 241 ಮಂದಿ ಮನೆಯಲ್ಲಿ ವೈದ್ಯಕೀಯ ನಿಗಾದಲ್ಲಿ ಇದ್ದಾರೆ. ಇಂದಿಗೆ 8 ಮಂದಿ ವೈದ್ಯಕೀಯ ನಿಗಾದ ಅವಧಿ ಪೂರ್ಣಗೊಳಿಸಿದ್ದು, ಅವರಲ್ಲಿ ಸೋಂಕು ಪತ್ತೆಯಾಗಿಲ್ಲ.
ಮಾರ್ಚ್ 14ರಂದು ದುಬೈನಿಂದ ಬಂದಿದ್ದ ವಿಮಾನದಲ್ಲಿ ಕಾಸರಗೋಡು ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಆ ವ್ಯಕ್ತಿ ಪ್ರಯಾಣಿಸಿದ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಮನೆಯಲ್ಲಿ ವೈದ್ಯಕೀಯ ನಿಗಾದಲ್ಲಿಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.