ಮಂಗಳೂರು : ಗಣೇಶ ಚತುರ್ಥಿಗಾಗಿ ಗಣಪತಿ ವಿಗ್ರಹಗಳ ತಯಾರಿಗೆ ಎರಡು ಮೂರು ತಿಂಗಳ ಮೊದಲೆ ಸಿದ್ಧತೆಗಳು ಆರಂಭವಾಗುತ್ತವೆ. ಆದರೆ, ಈ ಬಾರಿ ಕೊರೊನಾ ವೈರಸ್ ಅದಕ್ಕೆ ಬ್ರೇಕ್ ಹಾಕಿದೆ. ಅಲ್ಲದೆ, ಹಬ್ಬದ ಸಂಭ್ರಮಕ್ಕೆ ಕಡಿಮೆ ಸಮಯವಿರುವ ಕಾರಣ, ವಿಗ್ರಹಗಳ ಎತ್ತರ ಮತ್ತು ಗಾತ್ರದಲ್ಲಿ ಕೊಂಚ ಬದಲಾವಣೆಯಾಗಲಿದೆ.
ಹಾಗೆಯೇ ಗಣೇಶನ ವಿಗ್ರಹಗಳಿಗೆ ಬೇಡಿಕೆ ಕುಸಿಯುವ ಆತಂಕವೂ ತಯಾರಕರಿಗೆ ಎದುರಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಮಂಗಳೂರಿನಲ್ಲಿ ಗಣಪನ ತಯಾರಿ ಭರದಿಂದ ಸಾಗುತ್ತಿದೆ.
ಈ ಬಾರಿ ಗಣೇಶೋತ್ಸವ ನಡೆಸುವ ಕೆಲವು ಸಮಿತಿಯವರು ಕೊರೊನಾ ಕಾರಣದಿಂದ ಹಿಂದಿಗಿಂತ ಸಣ್ಣ ಗಣಪತಿ ಮೂರ್ತಿ ತಯಾರಿಗೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ 5 ಅಡಿ ಗಣಪತಿಯ ಗಾತ್ರ ಮೂರೂವರೆ, ನಾಲ್ಕು ಅಡಿಗೆ ಇಳಿದಿದೆ. ಜೊತೆಗೆ ಮನೆಯಲ್ಲಿ ಆರಾಧಿಸುವ ಸಣ್ಣ ಗಾತ್ರದ ಗಣಪತಿಯ ತಯಾರಿಯೂ ನಡೆಯುತ್ತಿದೆ ಎಂದು ಮೂರ್ತಿಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಇಲ್ಲಿನ ಕಾರ್ ಸ್ಟ್ರೀಟ್ನಲ್ಲಿರುವ ಕಿಶೋರ್ ಪೈ ಮಾಹಿತಿ ನೀಡಿದರು.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ (ಕೋವಿಡ್ ಆಸ್ಪತ್ರೆ) ಸಿಬ್ಬಂದಿ ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶನನ್ನು ಪ್ರತಿಷ್ಠಾಪಿಸುವ ಸಾಧ್ಯತೆ ಇದೆ. ಈ ವರ್ಷ ಅಲ್ಲಿ ಗಣಪತಿಯ ಆರಾಧನೆ ನಡೆಯುವ ಕುರಿತು ಸ್ಪಷ್ಟ ಮಾಹಿತಿ ಇಲ್ಲವಾದ್ರೂ, ಸಿಬ್ಬಂದಿಗಾಗಿ ಕಲಾವಿದ ಕಿಶೋರ್ ಪೈ ಅವರು ವಿಶೇಷ ಮೂರ್ತಿ ನಿರ್ಮಿಸಿದ್ದಾರೆ. ಸಿಂಹದ ಮೇಲೆ ಕುಳಿತ ಗಣಪತಿಯನ್ನು ತಯಾರಿಸಲಾಗಿದ್ದು, ಅದನ್ನು ವೆನ್ಲಾಕ್ ಆಸ್ಪತ್ರೆ ಸಿಬ್ಬಂದಿ ನೀಡುವ ಸಲುವಾಗಿಯೇ ತಯಾರಿಸಲಾಗಿದೆ ಎಂದು ಅವರು ಹೇಳಿದರು.