ಮಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರ ಜಾಗಕ್ಕೆ ದ.ಕ. ಜಿಲ್ಲಾ ಕಾಂಗ್ರೆಸ್ ನಾಯಕರು ತೆರಳಿ ಮೃತರ ಅಂತಿಮ ದರ್ಶನ ಪಡೆಯುವ ಮೂಲಕ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ವೃದ್ಧೆ ಜು.24ರಂದು ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರ ನಗರದ ಬೋಳೂರಿನ ರುದ್ರಭೂಮಿಯಲ್ಲಿ ನಡೆದಿತ್ತು. ಆ ವೇಳೆ ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ಸೇರಿದಂತೆ ಕಾಂಗ್ರೆಸ್ ನಾಯಕರು ಸೋಂಕಿತೆಯ ಮೃತದೇಹದ ಪಿಪಿಇ ಕಿಟ್ ಅನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಬಿಚ್ಚಿ ಮುಖದರ್ಶನ ಮಾಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಐವಾನ್ ಡಿಸೋಜಾ ಅವರು, ವಿದೇಶದಲ್ಲಿರುವ ನಮ್ಮ ಪರಿಚಯಸ್ಥರ ತಾಯಿ ಮೃತಪಟ್ಟಿದ್ದು, ಅವರಿಗೆ ಮೃತರ ಅಂತಿಮ ದರ್ಶನ ಮಾಡಲು ನಾವು ಅಲ್ಲಿಗೆ ಹೋಗಿದ್ದೇವೆ ಹೊರತು, ನಾವಾಗಿ ಅಂತಿಮ ದರ್ಶನ ಮಾಡಿಲ್ಲ. ಅಲ್ಲದೆ, ನಾವು ಮೃತದೇಹದ ಪ್ಯಾಕ್ ಸರಿಸಿದ್ದಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಮುಖದರ್ಶನ ಮಾಡಿಸಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.
ದ.ಕ.ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ. ರತ್ನಾಕರ್ ಮಾತನಾಡಿ, ಕೋವಿಡ್ ನಿಯಮದ ಪ್ರಕಾರ ಮುಖದ ಭಾಗವನ್ನು ಪಾರದರ್ಶಕವಾಗಿ ಸೀಲ್ ಮಾಡಲಾಗುತ್ತದೆ. ಇದನ್ನು ತೆರೆಯಲು ಅವಕಾಶವಿಲ್ಲ. ಈ ಬಗ್ಗೆ ವಿಚಾರಿಸುತ್ತೇನೆ ಎಂದು ಹೇಳಿದ್ದಾರೆ.