ಮಂಗಳೂರು: ಕರಾವಳಿ ಆರ್ಥಿಕವಾಗಿ ಮುಂದುವರಿದಲ್ಲಿ ಇಡೀ ರಾಜ್ಯದ ಆರ್ಥಿಕತೆಯ ಮೇಲೆ ಬಹಳ ದೊಡ್ಡ ಮಟ್ಟದ ಪ್ರಭಾವ ಬೀರಲಿದೆ. ಆದ್ದರಿಂದ ಸರಕಾರ ಎಲ್ಲಾ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬಂಟ್ವಾಳ ತಾಲೂಕಿನ ಬಂಟರಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕರಾವಳಿಗೆ ಅತೀ ಹೆಚ್ಚಿನ ಒತ್ತು ನೀಡುವ ಕಾರ್ಯ ಮಾಡುತ್ತಿದೆ. ಸರ್ಕಾರದ ಮುಖ್ಯಸ್ಥನಾಗಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿ ಹಾಗೂ ಇಲ್ಲಿನ ಹಲವಾರು ವರ್ಷಗಳ ಸಮಸ್ಯೆಗಳನ್ನು ಪರಿಹಾರ ಮಾಡುವ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಎಂದರು.
ಪ್ರವಾಸೋದ್ಯಮಕ್ಕೆ ಒತ್ತು: ಕರಾವಳಿಯಲ್ಲಿ ಟೂರಿಸಂಗೆ ವಿಫುಲ ಅವಕಾಶಗಳಿದ್ದರೂ ದುರ್ದೈವವಶಾತ್ ಗೋವಾ ಹಾಗೂ ಕೇರಳಕ್ಕಿರುವ ಸಿಆರ್ಝಡ್ ನಾರ್ಮ್ಸ್ ನಮಗೆ ದೊರಕಿಲ್ಲ. ಆದರೆ ಶೀಘ್ರದಲ್ಲೇ ಸಿಆರ್ಝಡ್ ನಾರ್ಮ್ಸ್ ಸಡಿಲಗೊಳಿಸಿ ಈ ಭಾಗದ ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ ಎಂದರು.
ರಾಜ್ಯ ಸರಕಾರ ಎಲ್ಲಾ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುತ್ತಿದೆ. ಸಣ್ಣಪುಟ್ಟ ಘಟನೆಗಳನ್ನು ಬಿಟ್ಟಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಿದ್ದೇವೆ. ವಿರೋಧ ಪಕ್ಷದವರು ಹತಾಶರಾಗಿ ಎಲ್ಲಾ ವಿಚಾರಗಳನ್ನು ತಿರುಚಿ ಹೇಳುತ್ತಿದ್ದಾರೆ. ಸರಕಾರ ಎಲ್ಲಾ ವಿಚಾರಗಳಿಗೆ ಸ್ಪಂದಿಸಿ ಪರಿಹಾರ ಕೊಡುವುದನ್ನು ಅವರಿಗೆ ಜೀರ್ಣಿಸಲಾಗುತ್ತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ, ಸಚಿವರಾದ ಸುನಿಲ್ ಕುಮಾರ್, ಲಕ್ಷ್ಮಣ ಸವದಿ, ಕೋಟ ಶ್ರೀನಿವಾಸ ಪೂಜಾರಿ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಶ್ರೀರಾಮುಲು, ಅಂಗಾರ, ಶಾಸಕರಾದ ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: 'ಸಚಿವ ಈಶ್ವರಪ್ಪ ರಾಜೀನಾಮೆ ನೀಡಬಾರದು': ಶಿವಮೊಗ್ಗದಲ್ಲಿ ಬೆಂಬಲಿಗರ ಪ್ರತಿಭಟನೆ