ಮಂಗಳೂರು : ಮಹಾರಾಷ್ಟ್ರದಲ್ಲಿ ಸಿಎಂ ಉದ್ಭವ್ ಠಾಕ್ರೆ ಎನ್ಆರ್‌ಸಿ, ಎನ್ಪಿಆರ್ನ ವಿರೋಧಿಸಿದ್ದರೂ ಸಿಎಎ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಿಲ್ಲ. ಆದರೆ, ಜಾರಿಗೊಳಿಸದಿರುವಂತೆ ಸಿಎಂ ಮನವೊಲಿಕೆ ಮಾಡಲಾಗುವುದು ಎಂದು ಬಾಂದ್ರಾ ಪೂರ್ವ ಕ್ಷೇತ್ರದ ಶಾಸಕ ಝೀಶನ್ ಸಿದ್ಧೀಕ್ ಹೇಳಿದರು.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸಿಎಂ ಉದ್ಧವ್ ಠಾಕ್ರೆ ಈ ಬಗ್ಗೆ ನಿನ್ನೆ ಪ್ರಧಾನಿ ಮೋದಿಯವರಲ್ಲಿ ಮಾತನಾಡಿದ್ದಾರೆ. ಆದರೆ, ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ಪ್ರಧಾನಿ ಅಭಯ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರವಾಗಿರೋದರಿಂದ ನಾವು ಸಿಎಎ ಜಾರಿಗೊಳಿಸದಿರುವಂತೆ ಸಿಎಂ ಮನವೊಲಿಕೆಗೆ ಯತ್ನಿಸುತ್ತೇವೆ ಎಂದರು. ನಾನು ಯುವ ಶಾಸಕ ಆಗಿರೋದರಿಂದ ನನ್ನ ಮೊದಲ ಆದ್ಯತೆ ಉದ್ಯೋಗ ಹಾಗೂ ಶಿಕ್ಷಣ. ಅಲ್ಲದೆ ಶುದ್ಧ ಕುಡಿಯುವ ನೀರಿಗೂ ಹೆಚ್ಚಿನ ಮಹತ್ವೆ ನೀಡುವ ಉದ್ದೇಶವಿದೆ ಎಂದರು ಸಿದ್ಧೀಕ್.
ಮಂಗಳೂರು ಶಿಕ್ಷಣ ಕೇಂದ್ರವಾಗಿರೋದರಿಂದ ನಾನು ಇಲ್ಲಿಗೆ ಭೇಟಿ ನೀಡಿದ್ದು, ಇಲ್ಲಿನ ಶಿಕ್ಷಣದ ಬಗ್ಗೆ ಮಾಹಿತಿ ಕಲೆಹಾಕಿ ಮುಂದೆ ನಮ್ಮ ಕ್ಷೇತ್ರದ ಶಿಕ್ಷಣವನ್ನು ಸುಧಾರಿಸುವ ಗುರಿ ಹೊಂದಿದ್ದೇನೆ ಎಂದರು. ಮಹಾರಾಷ್ಟ್ರದಲ್ಲಿ ಉದ್ಯೋಗ ಸೃಷ್ಟಿಗೆ ಮುಂದಿನ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತೆಗೆದುಕೊಳ್ಳುತ್ತೇವೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮುಂಬೈನಲ್ಲಿ 24×7 ಕೈಗಾರಿಕೆಗಳಲ್ಲಿ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಲು ಅನುವು ಮಾಡಲಾಗುವುದು ಎಂದು ಝೀಶನ್ ಸಿದ್ಧೀಕ್ ಹೇಳಿದರು.