ಮಂಗಳೂರು: ಭಾರತೀಯ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಶೀಲನೆ ಮಾಡಲು ಆದೇಶ ನೀಡಿದ್ದು, ನಾಗರಿಕರು ತಮ್ಮ ವಿವರಗಳನ್ನು ಸ್ವಯಂ ಪರಿಶೀಲಿಸಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೇಳಿದ್ದಾರೆ.
ಇಂದು ಬೆಳಗ್ಗೆ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ನಾಗರಿಕರು ಮತದಾರರ ಸಹಾಯವಾಣಿ ಮೊಬೈಲ್ ಆ್ಯಪ್, www.nvsp.in ಅಥವಾ ಮತದಾರರ ಸಹಾಯವಾಣಿ 1950 ಸಂಖ್ಯೆಗೆ ಕರೆಮಾಡಿ ಪರಿಶೀಲನೆ ಮಾಡಬಹುದು ಎಂದು ಹೇಳಿದರು.
ಲೋಕಸಭಾ ಚುನಾವಣೆ ಸಂದರ್ಭ ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಲು ಮತದಾರರ ಭಾವಚಿತ್ರ ಹಾಗೂ ವಿವರಗಳನ್ನು ಸಮರ್ಪಕವಾಗಿ ನಮೂದಿಸುವ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಸೆ.1 ರಿಂದ ಅ.15ರವರೆಗೆ ನಡೆಸಲು ಚುನಾವಣಾ ಆಯೋಗ ಆದೇಶ ನೀಡಿದೆ ಎಂದರು.
ಮತದಾರರ ಪಟ್ಟಿಯ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಪರಿಶೀಲನೆಗೆ ಅಗತ್ಯವಿರುವ ಯಾವುದಾದರೂ ಒಂದು ದಾಖಲೆಗಳನ್ನು ಹಾಜರುಪಡಿಸಬೇಕು. ಪಾಸ್ ಪೋರ್ಟ್, ವಾಹನ ಚಾಲನಾ ಪರವಾನಿಗೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕಗಳು, ಪಡಿತರ ಚೀಟಿ, ಸರ್ಕಾರಿ/ಅರೆ ಸರ್ಕಾರಿ ಅಧಿಕಾರಿಗಳ ಗುರುತಿನ ಚೀಟಿ ಇತ್ಯಾದಿಯನ್ನು ಹಾಜರಿಪಡಿಸಬಹುದು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವುದು, ಮತದಾರರಪಟ್ಟಿಯ ಪರಿಶೀಲನೆ ಹಾಗೂ ದೃಢೀಕರಣ ಮಾಡಿಕೊಳ್ಳಲು ಅವಕಾಶವಿದೆ ಎಂದು ಅವರು ಹೇಳಿದರು.
ಅಲ್ಲದೆ ಮತಗಟ್ಟೆ ಅಧಿಕಾರಿಗಳು ಸೆ.1ರಿಂದ ಸೆ.30ರವರೆಗೆ ಮನೆ ಮನೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿಯೂ ಯಾವುದಾದರೊಂದು ದಾಖಲೆಯನ್ನು ನಮೂದಿಸಿ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೇಳಿದರು.