ಚಾಮರಾಜನಗರ: ಕೆಡಿಪಿ ಸಭೆಯಲ್ಲಿ ಸಚಿವರು ಮತ್ತು ಶಾಸಕರು ಗಂಭೀರ ಚರ್ಚೆ ನಡೆಸುತ್ತಿದ್ದರೇ ಯಥಾಪ್ರಕಾರ ಅಧಿಕಾರಿಗಳು ಇಂದು ಕೂಡ ಮೊಬೈಲ್ ನಲ್ಲಿ ಬಿಝಿ ಆದ ಘಟನೆ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ ಕುಮಾರ್ ನಡೆಸಿದ ಸಭೆಯಲ್ಲಿ ಕಂಡುಬಂದಿತು. ಕಾವೇರಿದ ಚರ್ಚೆಯಲ್ಲಿ ಕೆಲ ಅಧಿಕಾರಿಗಳು ಕೂಲಾಗಿ ಚಾಟಿಂಗ್‌ನಲ್ಲಿ ನಡೆಸುತ್ತಿದ್ದರೇ ಒರ್ವ ಮಹಿಳಾ ಅಧಿಕಾರಿ ನಿದ್ರೆಗೆ ಜಾರಿದ ಪ್ರಸಂಗವು ನಡೆಯಿತು.
ಕಳೆದ ವಾರವಷ್ಟೇ ನಡೆದಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲೂ ಅಧಿಕಾರಿಗಳು ಮೊಬೈಲ್ ಗೇಮ್ ನಲ್ಲಿ ನಿರತರಾಗಿದ್ದರು. ಅಂದಿನ ಡಿಸಿಯಾಗಿದ್ದ ಬಿ. ಬಿ. ಕಾವೇರಿ ನೋಟಿಸ್ ಕೂಡ ಜಾರಿ ಮಾಡಿದರೂ ಕ್ಯಾರೇ ಎನ್ನದೇ 8 ಕ್ಕೂ ಹೆಚ್ಚು ಅಧಿಕಾರಿಗಳು ಮೊಬೈಕ್ ನಲ್ಲಿ ಬಿಝಿ ಆಗಿ ಸಭೆಯ ಗಂಭೀರತೆ ಮರೆತರು.
ಇನ್ನು, ಈ ವಿಚಾರ ತಿಳಿದ ಸಚಿವ ಸುರೇಶ್ ಕುಮಾರ್ ಊಟದ ನಂತರದ ಅವಧಿಯಲ್ಲಿ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡು ಮೂಬೈಲ್ ಉಪಯೋಗಿಸಲೇಬೇಕೆಂದರೆ ರಜೆ ಹಾಕಿ, ಇಲ್ಲವೇ ಸಿಇಒಗೆ ಹೇಳಿ ಹೊರನಡೆಯಿರಿ, ಇಡೀ ಜಿಲ್ಲೆಯ ಜನರಿಗೆ ಅಗೌರವ ತೋರಿಸುತ್ತೀದ್ದೀರಿ ಎಂದು ಕ್ಲಾಸ್ ತೆಗೆದುಕೊಂಡರು.
ಚರ್ಚೆ ವೇಳೆ ಮೊಬೈಲ್ ಬಳಸಿರುವವರ ವಿರುದ್ಧ ಕ್ರಮ ಸಿಇಒ ತೆಗೆದುಕೊಳ್ಳಬೇಕು, ಮುಂದಿನ ಸಭೆಯಲ್ಲಿ ಮೊಬೈಲ್ ಬಳಸುವವರಿಗೆ ಇವರು ಪಾಠವಾಗಬೇಕೆಂದು ಎಂದು ಕಿಡಿಕಾರಿ ಮುಂದಿನ ಸಭೆಯಲ್ಲಿ ಯಾವ ಅಧಿಕಾರಿಯೂ ಕೂಡ ಮೊಬೈಲ್ ತರದಂತೆ ಕ್ರಮ ವಹಿಸಲು ಡಿಸಿಗೆ ಸೂಚಿಸಿದರು.