ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡದೆ ಸತಾಯಿಸುತ್ತಿದ್ದು, ತಕ್ಷಣ ಸ್ಕಾಲರ್ಶಿಪ್ ನೀಡುವಂತೆ ಆಗ್ರಹಿಸಿ ಸಿಎಫ್ಐ ಇಂದು ನಗರದ ಪಾಂಡೇಶ್ವರದಲ್ಲಿರುವ ಮೌಲಾನಾ ಆಜಾದ್ ಭವನದಲ್ಲಿರುವ ಅಲ್ಪಸಂಖ್ಯಾತರ ಕಚೇರಿಗೆ ಮುತ್ತಿಗೆ ಹಾಕಿತು.
400-500 ವಿದ್ಯಾರ್ಥಿಗಳು ಎ.ಬಿ.ಶೆಟ್ಟಿ ವೃತ್ತದಿಂದ ಅಲ್ಪಸಂಖ್ಯಾತರ ಕಚೇರಿವರೆಗೆ ಜಾಥಾ ನಡೆಸಿ, ಬಳಿಕ ಮುತ್ತಿಗೆ ಹಾಕಿತು. ವಿದ್ಯಾರ್ಥಿಗಳು ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಬಂದು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ತಾವು ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಮೌಲಾನಾ ಆಜಾದ್ ಭವನ ಅಲ್ಪಸಂಖ್ಯಾತರ ಕಚೇರಿಯ ಅಧಿಕಾರಿಗಳು ಬಂದು ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಮೇಲಾಧಿಕಾರಿಗಳ ಬಳಿ ತಿಳಿಸಲಾಗುತ್ತದೆ ಎಂದು ಪ್ರತಿಭಟನಾಕಾರರನ್ನು ಸಮಾಧಾನಿಸಲು ಯತ್ನಿಸಿದರು.
ಅಧಿಕಾರಿಗಳ ಗೊಂದಲದ ಸಮಾಧಾನದಿಂದ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಮೇಲಾಧಿಕಾರಿಯಲ್ಲಿ ಮಾತನಾಡಿದ ಮೌಲಾನಾ ಆಜಾದ್ ಭವನ ಅಲ್ಪಸಂಖ್ಯಾತ ಕಚೇರಿಯ ಅಧಿಕಾರಿಗಳು, 10 ದಿನಗಳ ಒಳಗೆ ಸಿಎಫ್ಐ ನಾಯಕರೊಂದಿಗೆ ಸಭೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.