ಮಂಗಳೂರು: ಯಡಿಯೂರಪ್ಪರ ಆಡಿಯೋ ವೈರಲ್ ಆಗಿದ್ದು, ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ. ಆಡಿಯೋದ ಸ್ವರ ತನ್ನದೇ ಎಂದು ಮುಖ್ಯಮಂತ್ರಿ ಒಪ್ಪಿದ್ದಾರೆ. ಆದ್ದರಿಂದ ಅವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರು ಕಾಂಗ್ರೆಸ್-ಜೆಡಿಎಸ್ ತೊರೆಯಲು ಪ್ರೇರೇಪಿಸಿಲ್ಲ. ಆಪರೇಷನ್ ಕಮಲ ಮಾಡಿಲ್ಲ ಎಂದು ರಾಜ್ಯದ ಜನತೆಗೆ ಮೋಸ ಮಾಡಿದ್ದರು. ಈಗ ಬಿಜೆಪಿಗರ ನಿಜ ಬಯಲಾಗಿದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಪಕ್ಷದಲ್ಲೇ ಪಿತೂರಿ ನಡೆಯುತ್ತಿದೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಸುಳಿವನ್ನೂ ನೀಡಿದ್ದಾರೆ. ಇಷ್ಟಾದರೂ ಬಿಜೆಪಿಗೆ ಸರ್ಕಾರ ನಡೆಸಲು ಯಾವ ನೈತಿಕತೆ ಇದೆ. ಅನರ್ಹ ಶಾಸಕರ ಬಗ್ಗೆ ಏನೂ ಗೊತ್ತಿಲ್ಲ ಎಂದವರು ಇಂದು ಅವರಿಗೆ ಏನಾದರು ಮಾಡಬೇಕು ಎನ್ನುತ್ತಿದ್ದಾರೆ. ಹೆಚ್ಚು ದಿನ ಈ ತಂತ್ರದಿಂದ ದೂರವಿರಲು ಸಾಧ್ಯವಿಲ್ಲ. ಈ ಬಗ್ಗೆ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ರಾಜ್ಯಪಾಲರಿಗೂ ದೂರು ನೀಡಲಾಗಿದೆ ಎಂದರು.
ಈಗ ಮುಖ್ಯಮಂತ್ರಿ ಭೇಟಿಗೆ ಬಂದಾಗ ಮೊಬೈಲ್ ಕೊಂಡೊಯ್ಯುವಂತಿಲ್ಲ ಎಂಬ ಹೊಸ ವ್ಯವಸ್ಥೆ ಮಾಡಲಾಗಿದೆ. ವಿಡಿಯೋ, ಫೋಟೋ ತೆಗೆಯುವಂತಿಲ್ಲ ಎಂದರೆ ಏನರ್ಥ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.