ಮಂಗಳೂರು: ಮಂಗಳೂರಿನಲ್ಲಿ ಶಾಂತಿ ಕಾಪಾಡಿದ್ದೇ ಐವನ್ ಡಿಸೋಜಾ ಹಾಗಾಗಿ ಅವರನ್ನೇ ಗಡಿಪಾರು ಮಾಡಲು ನಾವು ಉಪವಾಸ ಕೂರಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಿಗೆ ಗೃಹ ಸಚಿವ ಅಮಿತ್ ಶಾ ಬಂದರೆ ಶಾಂತಿ ಕದಡುತ್ತದೆ, ಅದಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂಬ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಈ ರೀತಿ ವ್ಯಂಗ್ಯವಾಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸಲು ರಾಜ್ಯದಲ್ಲಿ ಮೂರು ಕಡೆ ಬೃಹತ್ ಸಮಾವೇಶ ಮಾಡಲು ನಿರ್ಧರಿಸಲಾಗಿದೆ. ಮಂಗಳೂರು, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಈ ಸಮಾವೇಶ ನಡೆಯಲಿದೆ. ಸಿಂಧನೂರಿನಲ್ಲಿ ಬಾಂಗ್ಲಾದೇಶಿಯರು, ಪಾಕಿಸ್ತಾನಿಯರು ಇರುವ ಕಾರಣಕ್ಕೆ ಅಲ್ಲಿ ಕೂಡ ಸಮಾವೇಶ ಚಿಂತನೆ ಇದೆ. ಇನ್ನುಳಿದಂತೆ ಜಿಲ್ಲಾಕೇಂದ್ರಗಳಲ್ಲಿ ಸಮಾವೇಶ ನಡೆಯಲಿದೆ. ಯಾವ ಸಮಾವೇಶದಲ್ಲಿ ಯಾರು ಪಾಲ್ಗೊಳ್ಳುತ್ತಾರೆ ಎಂದು ಇನ್ನೂ ತೀರ್ಮಾನ ಆಗಿಲ್ಲ ಎಂದು ತಿಳಿಸಿದರು.