ಬಂಟ್ವಾಳ(ದಕ್ಷಿಣ ಕನ್ನಡ) : ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾವಿನಕಟ್ಟೆಯಲ್ಲಿರುವ ಕೃಷಿಕ, ಪರಿಸರ ಪ್ರೇಮಿ, ಪಕ್ಷಿ ಪ್ರೇಮಿ ನಿತ್ಯಾನಂದ ಶೆಟ್ಟಿ ಅವರು ತಮ್ಮ ತೋಟದಲ್ಲಿ ಅಡಿಕೆ ಸೇರಿದಂತೆ ವಿವಿಧ ಕೃಷಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೇವಲ ಕೃಷಿಕರಾಗಿ ಮಾತ್ರವಲ್ಲದೆ ಪರಿಸರದ ಉಳಿವಿಗಾಗಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ.
ಈಗಾಗಲೇ ಇವರು ತಮ್ಮ ಎರಡು ಎಕರೆ ಭೂಮಿಯನ್ನು ಪಕ್ಷಿಗಳಿಗಾಗಿ ಮೀಸಲಿಟ್ಟಿದ್ದಾರೆ. ಇಲ್ಲಿ ಬೆಳೆಯುವ ಯಾವುದೇ ಹಣ್ಣು, ಹಂಪಲುಗಳನ್ನು ತೆಗೆಯದೆ ಪಕ್ಷಿಗಳಿಗೆ ತಿನ್ನಲು ಬಿಡುತ್ತಿದ್ದಾರೆ. ತಮ್ಮ ತೋಟದಲ್ಲಿ ಪಕ್ಷಿಗಳಿಗಾಗಿ ಅಲ್ಲಲ್ಲಿ ಗೂಡುಗಳನ್ನು ಸಹ ನಿರ್ಮಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಪರಿಸರ ಜಾಗೃತಿಯನ್ನು ಮೂಡಿಸುವ ಅಭಿಯಾನ ಕೈಗೊಂಡಿದ್ದಾರೆ.
ಇತ್ತೀಚೆಗೆ ನಿತ್ಯಾನಂದ ಶೆಟ್ಟಿ ಅವರ ತಾಯಿ ಸುಮತಿ ಅವರು ನಿಧನರಾದರು. ಇವರ ಅಂತ್ಯಕ್ರಿಯೆ ವೇಳೆ ಮಾವಿನ ಮರವನ್ನು ಕಡಿಯಲಾಗಿತ್ತು. ಅಮ್ಮನನ್ನು ಕಳೆದುಕೊಂಡು ದುಃಖತಪ್ತರಾಗಿದ್ದ ನಿತ್ಯಾನಂದ ಶೆಟ್ಟಿ ಅವರಿಗೆ ಮಾವಿನ ಮರವನ್ನು ಕಡಿದದ್ದು ಮತ್ತಷ್ಟು ದುಃಖವನ್ನು ನೀಡಿತ್ತು.
ಇದಕ್ಕಾಗಿ ತಾಯಿಯ ಉತ್ತರಕ್ರಿಯೆ ದಿನ ಹಸಿರು ಆರಾಧನೆ ಎಂಬ ಯೋಜನೆ ಮಾಡಿದ್ದಾರೆ. ತಾಯಿಯ ಅಂತ್ಯಕ್ರಿಯೆ ಮಾಡಿದ ಸ್ಥಳದಲ್ಲಿ ಸುಮಾರು 20 ಬಗೆಯ ವಿವಿಧ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.
ಇದನ್ನೂ ಓದಿ: ತುಮಕೂರಲ್ಲಿ ಪತ್ನಿಯನ್ನು ಲಾಡ್ಜ್ ಕರೆದೊಯ್ದು ಕಾಲು ಕತ್ತರಿಸಿದ ಪತಿ.. ಚೂರಿ ಇರಿದುಕೊಂಡು ಪೊಲೀಸರಿಗೆ ಶರಣಾದ!
ನಿತ್ಯಾನಂದ ಶೆಟ್ಟಿ ಅವರು ಈ ಗಿಡಗಳನ್ನು ಬೆಳೆಸುವ ಮೂಲಕ ಅಮ್ಮನನ್ನು ಸದಾ ನೆನಪಿಸುವ ಕಾರ್ಯ ಮಾಡುತ್ತಿದ್ದಾರೆ. ಇವರ ಈ ಯೋಜನೆಗೆ ಇವರ ಪತ್ನಿ ರಮ್ಯ ಕೈಜೋಡಿಸಿದ್ದಾರೆ. ಒಂದು ಮರವನ್ನು ಕಡಿದ ಕಾರಣದಿಂದಾಗಿ ಹಲವು ಗಿಡಗಳನ್ನು ನೆಟ್ಟು ಪರಿಸರದ ಮೇಲಿನ ತಮ್ಮ ಪ್ರೀತಿಯನ್ನು ಮೆರೆದಿದ್ದಾರೆ. ನಿತ್ಯಾನಂದ ಶೆಟ್ಟಿ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ.