ಮಂಗಳೂರು: ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಖಂಡಿಸಿ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು. ಹರ್ಷನ ಹತ್ಯೆಯನ್ನು ನಾವು ನಷ್ಟವಾಗಲು ಬಿಡುವುದಿಲ್ಲ ಎಂದು ಮತಾಂಧ ಶಕ್ತಿಗಳಿಗೆ ಎಚ್ಚರಿಕೆ ರವಾನಿಸಿದರು.
ನಗರದ ಕದ್ರಿಯಲ್ಲಿರುವ ಮಲ್ಲಿಕಟ್ಟೆ ಸರ್ಕಲ್ನಲ್ಲಿ ಬಜರಂಗದಳ ನಡೆಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಸಾಕಷ್ಟು ಹಿಂದೂ ಕಾರ್ಯಕರ್ತರ ಹತ್ಯೆಯನ್ನು ನಾವು ಸಹಿಸಿದ್ದೇವೆ. ಪೆಟ್ಟು ತಿಂದಷ್ಟು ತಿಂದಿದ್ದೇವೆ. ಇನ್ನು ಸಹಿಸಲು ಅಸಾಧ್ಯ ಎಂದು ಹೇಳಿದರು.
ಕೆಲವರು ದೇಶಕ್ಕಾಗಿ ದುಡಿಯುತ್ತಿರುವ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿ ಹಿಂದೂ ಸಂಘಟನೆಯ ಕಾರ್ಯವನ್ನು ಹತ್ತಿಕ್ಕುವ ಕೆಲಸವನ್ನು ಮಾಡಬಹುದು ಎಂದು ತಿಳಿದಿದ್ದಾರೆ. ಇದು ಕೇವಲ ಭ್ರಮೆ ಅಷ್ಟೇ. ಆದ್ದರಿಂದ ಈ ಪ್ರತಿಭಟನೆ ಮೂಲಕ ಎಸ್ ಡಿಪಿಐ, ಪಿಎಫ್ಐ ಎಚ್ಚರಿಕೆ ನೀಡುತ್ತಿದ್ದೇವೆ. ಬಜರಂಗದಳ ಹುಟ್ಟಿದ್ದೇ ಸಂಘರ್ಷ, ಹೋರಾಟಗಳಿಂದ. ನಾವು ಒಬ್ಬ ಹರ್ಷನನ್ನು ಕಳೆದುಕೊಂಡಿರಬಹುದು. ಆದರೆ, ಇಂತಹ ಸಾವಿರಾರು ಹರ್ಷರನ್ನು ಸೃಷ್ಟಿಸುವ ತಾಕತ್ತು ಬಜರಂಗದಳಕ್ಕಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಬಂದಿರೋದೇ ಬಜರಂಗದಳದ ಕಾರ್ಯಕರ್ತರ ಬಲಿದಾನದಿಂದ. ಆದ್ದರಿಂದ ತಮ್ಮ ಹೇಳಿಕೆ, ಸಾಂತ್ವನಗಳು ನಮಗೆ ಅಗತ್ಯವಿಲ್ಲ. ಬದಲಾಗಿ ಹರ್ಷನ ಹತ್ಯೆ ಮಾಡಿದವರ ಎನ್ ಕೌಂಟರ್ ಮಾಡಿ. ಈ ಮೂಲಕ ಹರ್ಷನ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಿ ಎಂದು ಪುನೀತ್ ಅತ್ತಾವರ ಒತ್ತಾಯಿಸಿದ್ದಾರೆ.
ಓದಿ : ಹತ್ಯೆಗೂ ಮುನ್ನ ಹರ್ಷನಿಗೆ ಹುಡುಗಿಯರಿಂದ ವಿಡಿಯೋ ಕಾಲ್: ಕೊಲೆ ರಹಸ್ಯ ಬಿಚ್ಚಿಟ್ಟ ಸ್ನೇಹಿತ