ಬೆಳ್ತಂಗಡಿ (ದ.ಕನ್ನಡ): ಕೃಷಿಕರೊಬ್ಬರು ಕೃಷಿಯೊಂದಿಗೆ ಮೀನು ಸಾಕಣೆ ಪ್ರಾರಂಭಿಸಿ ಹೆಚ್ಚು ಆದಾಯ ಪಡೆದು ಯಶಸ್ಸು ಕಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಡಿಬಾಗಿಲು ಎಂಬಲ್ಲಿ ಜಾರ್ಜ್ ಸ್ಕಾಟ್ ಎಂಬ ಕೃಷಿಕರೊಬ್ಬರು ಉತ್ತಮ ನೀರಿರುವ ತನ್ನ ಕೃಷಿ ಭೂಮಿಯಲ್ಲಿ ಕೆರೆಗಳು ಹಾಗೂ ಬಯೋಫ್ಲೋಕ್ ಮಾದರಿಯಲ್ಲಿ ದೊಡ್ಡ ಟ್ಯಾಂಕ್ ನಿರ್ಮಾಣ ಮಾಡಿ ಸುಮಾರು 20 ಸಾವಿರ ಮೀನುಗಳನ್ನು ಸಾಕುತ್ತಿದ್ದಾರೆ. ಇವರು ಕಳೆದ ಎರಡು ವರ್ಷಗಳಿಂದ ಮೀನಿನ ಕೃಷಿ ಮಾಡುತ್ತಿದ್ದಾರೆ.
ಜಾರ್ಜ್ ಸ್ಕಾಟ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಈಗಾಗಲೇ ಅಡಿಕೆ, ತೆಂಗು, ರಬ್ಬರ್, ಕೃಷಿ ಇದ್ದು ಕಳೆದ ಎರಡು ವರ್ಷಗಳಿಂದ ಮೀನು ಸಾಕಾಣಿಕೆಯ ಬಗ್ಗೆ ಆಸಕ್ತಿ ಹೊಂದಿ ಫಿಶರೀಸ್ ಇಲಾಖೆ ಮೂಲಕ ತರಬೇತಿ ಪಡೆದುಕೊಂಡು ಪ್ರಾರಂಭಿಸಿದ್ದೇವೆ. ಇಲ್ಲಿ ನೀರು ಹೆಚ್ಚು ಇರುವುದರಿಂದ ಸ್ವಲ್ಪ ಎತ್ತರ ಪ್ರದೇಶದ ಒಂದು ಎಕರೆಯಷ್ಟು ಜಾಗದಲ್ಲಿ ಎರಡು ವಿಧದಲ್ಲಿ ದೊಡ್ಡ ಕೆರೆಗಳನ್ನು ನಿರ್ಮಿಸಿ ಮೂರು ತಳಿಯ ಮೀನುಗಳನ್ನು ಸಾಕಲಾಗುತ್ತಿದೆ. ಒಳ್ಳೆಯ ಇಳುವರಿ ಕೂಡ ಬರುತ್ತಿದೆ. ಅದೇ ರೀತಿ ಬಯೋಫ್ಲೋಕ್ ಎಂಬ ಮಾದರಿಯಲ್ಲಿ 10 ದೊಡ್ಡ ಟ್ಯಾಂಕ್ ನಿರ್ಮಾಣ ಮಾಡಿ ಅದರಲ್ಲಿಯೂ ಮೀನು ಸಾಕಣೆ ಮಾಡಲಾಗುತ್ತಿದೆ.
ಕೆರೆಗಳಿಗಿಂತ ಬಯೋಪ್ಲೋಕ್ ಮಾದರಿ ಟ್ಯಾಂಕ್ಗಳಲ್ಲಿ ಅಧಿಕ ಲಾಭ ಗಳಿಸಬಹುದು. ಈ ರೀತಿ ಮೀನು ಸಾಕುವುದರಿಂದ ಶೇ.40ರಷ್ಟು ಫುಡ್ ಕಡಿಮೆ ಖರ್ಚಾಗುತ್ತದೆ. ಅದರಲ್ಲೇ ಬ್ಯಾಕ್ಟೀರಿಯಾ ಉತ್ಪಾದನೆ ಮಾಡಿ ಅದರಲ್ಲೇ ಆಹಾರವನ್ನು ಉತ್ಪಾದಿಸಿ ಮೀನುಗಳಿಗೆ ನೀಡಬಹುದು. ಇದರಿಂದ ಫೀಡ್ ಹೆಚ್ಚು ಹಾಕಬೇಕೆಂದಿಲ್ಲ. ಅದೇ ರೀತಿ ಮೀನು ಶೀಘ್ರ ಬೆಳವಣಿಗೆಯಾಗುತ್ತದೆ.
ಇದನ್ನೂ ಓದಿ: ಅಪ್ಪು ಮೇಲಿನ ಅಭಿಮಾನ: ಹುಬ್ಬಳ್ಳಿಯಿಂದ ಪಾದಯಾತ್ರೆ ಆರಂಭಿಸಿದ ಅಭಿಮಾನಿ
ಮೀನಿನ ಮರಿಗಳನ್ನು ಫಿಶರೀಸ್ ಇಲಾಖೆಯ ಮೂಲಕ ತರಿಸಲಾಗುತ್ತದೆ. ಅಲ್ಲದೇ ನಾವು ಈ ಕೆರೆಗಳ ನೀರನ್ನು ಪೋಲಾಗದಂತೆ ನೋಡಿಕೊಂಡು ಕೃಷಿಗೆ ಉಪಯೋಗ ಮಾಡುವುದರಿಂದ ಅದರಲ್ಲೂ ಅಧಿಕ ಇಳುವರಿ ಪಡೆಯುತ್ತಿದ್ದೇವೆ. ಅದರೆ ಮಾರ್ಕೆಂಟಿಗ್ ನಮಗೆ ದೊಡ್ಡ ಸವಾಲಾಗಿ ಕಾಡುತ್ತಿದೆ. ಸಮುದ್ರದ ಮೀನು ಇಲ್ಲಿನ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಸಿಗುವುದರಿಂದ ಸ್ಪಲ್ಪ ಕಷ್ಟವಾಗುತ್ತಿದೆ. ಸರಿಯಾದ ಮಾರ್ಕೆಟಿಂಗ್ ಸಿಕ್ಕಿದರೆ ಮೀನಿನ ಕೃಷಿಯಲ್ಲಿ ಉತ್ತಮ ಆದಾಯವನ್ನು ಪಡೆಯಬಹುದು.
ಈಗಾಗಲೇ ಸರ್ಕಾರ ಮೀನು ಸಾಕಣೆಗೆ ಪ್ರೋತ್ಸಾಹಧನ ನೀಡುತ್ತಿದೆಯಾದರೂ ಇನ್ನೂ ಹೆಚ್ಚಿನ ಸವಲತ್ತುಗಳನ್ನು ಹಾಗೂ ಉತ್ತಮ ಮಾರುಕಟ್ಟೆಯನ್ನು ಮೀನು ಕೃಷಿಕರಿಗೆ ಒದಗಿಸುವುದರ ಮೂಲಕ ಮೀನು ಸಾಕಾಣಿಕೆಗೆ ಪ್ರೋತ್ಸಾಹಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.