ಪುತ್ತೂರು : ಸಂಗೀತದಲ್ಲಿ ಪ್ರತಿ ಹಾಡಿಗೂ ಅದರದೇ ಆದ ಲಯ, ತಾಳಗಳಿವೆ. ಏಕಕಾಲಕ್ಕೆ ಒಂದೇ ಹಾಡನ್ನು ಎರಡು ತಾಳಗಳ ಮೂಲಕ ಪ್ರಸ್ತುತ ಪಡಿಸುವುದು ಅತ್ಯಂತ ಕ್ಲಿಷ್ಟಕರವಾದ ಪ್ರಯತ್ನ. ಇಂತಹ ಕ್ಲಿಷ್ಟಕರ ಪ್ರಯತ್ನ ಮಾಡುವ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿ ಮಂಜುನಾಥ್, ಏಷ್ಯಾ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಭರತನಾಟ್ಯದಲ್ಲಿ ವಿದ್ವತ್ ಪಡೆದಿರುವ ಮಂಜುನಾಥ್, ಆಸಕ್ತರಿಗೆ ಭರತನಾಟ್ಯ ತರಬೇತಿ ನೀಡುತ್ತಿದ್ದರು. ಆದರೆ, ಕೊರೊನಾ ಲಾಕ್ಡೌನ್ನಿಂದಾಗಿ ಎಲ್ಲಾ ರೀತಿಯ ತರಬೇತಿ ಕಾರ್ಯಗಳಿಗೆ ಬ್ರೇಕ್ ಬಿದ್ದಿದ್ದು, ಈ ಸಮಯದಲ್ಲಿ ಮನೆಯಲ್ಲೇ ಇದ್ದ ಅವರು, ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದರು. ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಆರಂಭಗೊಂಡಿದ್ದ ಏಕಕಾಲಕ್ಕೆ ಒಂದೇ ಹಾಡನ್ನು ಎರಡು ತಾಳಗಳ ಮೂಲಕ ಪ್ರಸ್ತುತ ಪಡಿಸುವ ಅವರ ಪ್ರಯತ್ನ, ಎರಡನೇ ಅಲೆಯ ಸಂದರ್ಭದಲ್ಲಿ ಸಂಪೂರ್ಣ ಸಫಲತೆ ಕಂಡಿತು.
ಒಂದೊಂದು ಹಾಡಿಗೂ ಒಂದೊಂದು ತರಹದ ತಾಳವಿದೆ. ಆದರೆ, ಮಂಜುನಾಥ್ ಒಂದು ಹಾಡಿಗೆ ಎರಡು ತಾಳವನ್ನು ಏಕಕಾಲಕ್ಕೆ ಹಾಕುವ ಮೂಲಕ ವಿಶಿಷ್ಟ ಪ್ರತಿಭೆ ತನ್ನದಾಗಿಸಿಕೊಂಡಿದ್ದಾರೆ. ಕ್ಲಾಸಿಕಲ್, ಭರತನಾಟ್ಯದ ತಿಲ್ಲಾನ, ಸಿನಿಮಾ ಸೇರಿದಂತೆ ವಿವಿಧ ಹಾಡುಗಳಿಗೆ ಎರಡು ತಾಳಗಳನ್ನು ಏಕಕಾಲಕ್ಕೆ ಹಾಕುವ ಮೂಲಕ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿದ್ದಾರೆ.
ಎಡಗೈಯಲ್ಲಿ ಸಂಕೀರ್ಣ ಚಾಪುತಾಳ ಹಾಕಿದರೆ, ಬಲಗೈಯಲ್ಲಿ ಮಿಶ್ರ ಚಾಪುತಾಳ ಹಾಕುವ ಮೂಲಕ ಸಂಗೀತ ದಿಗ್ಗಜರನ್ನು ಮಂತ್ರಮುಗ್ದರನ್ನಾಗಿಸುತ್ತಾರೆ. ತಮ್ಮ ಈ ಸಾಧನೆಯಿಂದಾಗಿ ಸಂಗೀತ ದಿಗ್ಗಜರನ್ನೊಳಗೊಂಡ ತಂಡದಿಂದ ಪರೀಕ್ಷೆಗೊಳಪಟ್ಟಿದ್ದ ಮಂಜುನಾಥ್, ಇದೀಗ ಏಷ್ಯಾ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೇವಲ ತಾಳ ಹಾಕುವ ಸಾಧನೆಯನ್ನಲ್ಲದೆ ಭರತನಾಟ್ಯದಲ್ಲೂ ವಿಶಿಷ್ಟ ಸಾಧನೆ ಮಾಡಿರುವ ಮಂಜುನಾಥ್, ಭರತನಾಟ್ಯದ ಪುಷ್ಪಾಂಜಲಿ, ಅಲರಿಪು, ಜತಿಸ್ವರ, ದರು, ತಿಲ್ಲಾನ ಮೊದಲಾದ ಸಾಹಿತ್ಯಿಕ ರಚನೆಗಳನ್ನು ಸಂಯೋಜಿಸಿದ್ದಾರೆ. ಮಕ್ಕಳು ಹಾಗೂ ಹೆಣ್ಣು ಧ್ವನಿಯಲ್ಲೂ ಹಾಡು ಹಾಡುವ ಮಾಂತ್ರಿಕ ಇವರಾಗಿದ್ದು, ಒಂದು ರೀತಿಯ ಸಕಲ ಕಲಾವಲ್ಲಭ ಎಂದರೆ ತಪ್ಪಾಗಲಾರದು.
ಭರತನಾಟ್ಯದ ಕಡೆಗೆ ಹೆಚ್ಚಿನ ಗಮನ ಕೊಡುವ ಉದ್ದೇಶದಿಂದ ಉಪನ್ಯಾಸ ವೃತ್ತಿಯಿಂದ ಹಿಂದೆ ಸರಿದಿರುವ ಮಂಜುನಾಥ್, ಮುಂದೆ ಭರತನಾಟ್ಯದಲ್ಲೇ ಉತ್ತಮ ಸಾಧನೆ ಮಾಡುವ ಇಂಗಿತದಲ್ಲಿದ್ದಾರೆ. ಅಲ್ಲದೆ, ತಮ್ಮ ಪ್ರತಿಭೆಯನ್ನು ಭರತನಾಟ್ಯದಲ್ಲಿ ಆಸಕ್ತವಿರುವವರಿಗೂ ಹಂಚಬೇಕು ಎನ್ನುವ ಅಭಿಲಾಷೆಯೂ ಮಂಜುನಾಥ್ ಅವರದ್ದಾಗಿದೆ. ಇದೇ ಕಾರಣಕ್ಕಾಗಿ ದಕ್ಷಿಣಕನ್ನಡದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಭರತನಾಟ್ಯವನ್ನು ರಾಜ್ಯದ ಇನ್ನಷ್ಟು ಕಡೆಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಕಲಬುರಗಿಯಲ್ಲೂ ಭರತನಾಟ್ಯ ತರಬೇತಿ ಸಂಸ್ಥೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಹೊಸಪೇಟೆಯ ದಂಪತಿ: ಪತಿ ಮೃತದೇಹ ಪತ್ತೆ, ಪತ್ನಿಗಾಗಿ ಶೋಧ